ಕಳಸ: ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿದ ಕೋಟ್ಯಂತರ ರೂ. ಅನುದಾನದಲ್ಲಿ ಕಳಸ ತಾಲೂಕಿನ ನಕ್ಸಲ್ ಪೀಡಿತ ಮಾವಿನಕೆರೆ ಗ್ರಾಮದ ಮುಜೆಕಾನು ಪ್ರದೇಶಕ್ಕೆ ಯಾವುದೇ ಅನುದಾನ ಮೀಸಲಿಡದೆ ಜಿಲ್ಲಾಡಳಿತ ಅನ್ಯಾಯ ಎಸಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ರಸ್ತೆ ಸಮಸ್ಯೆ ಎದುರಿಸುತ್ತಿರುವ ಈ ಗ್ರಾಮದ ಜನರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಹಳುವಳ್ಳಿ-ಹೊರನಾಡು ರಸ್ತೆಯಿಂದ ಮುಜೆಕಾನು ಸಂಪರ್ಕಿಸುವ ಸುಮಾರು 5 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಸುಮಾರು 12 ಕಿ.ಮೀ. ದೂರದಲ್ಲಿರುವ ಕಳಸ ಪಟ್ಟಣಕ್ಕೆ ಶಾಲೆ, ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ತೆರಳಲು ವಿದ್ಯಾರ್ಥಿಗಳು, ವೃದ್ಧರು ಮತ್ತು ಇತರೆ ಗ್ರಾಮಸ್ಥರು ಹರಸಾಹಸ ಪಡಬೇಕಿದೆ. ಈ ರಸ್ತೆಯ ದಯನೀಯ ಸ್ಥಿತಿಯಿಂದ ಕಳಸ ಪಟ್ಟಣಕ್ಕೆ ಒಮ್ಮೆ ಹೋಗಿ ಬರಲು ಆಟೋ ಬಾಡಿಗೆ 700 ರೂ. ನೀಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಲು ತಿಂಗಳಿಗೆ ಬರೋಬ್ಬರಿ 4,000 ರೂ. ಆಟೋ ಬಾಡಿಗೆ ನೀಡಬೇಕು. ಗ್ರಾಮಸ್ಥರ ತಿಂಗಳ ದುಡಿಮೆ ಸಂಪೂರ್ಣ ವಾಹನಗಳ ಬಾಡಿಗೆಗೆ ಸಾಗುತ್ತಿದೆ.
ಮುಜೆಕಾನು ಗ್ರಾಮದ ರಸ್ತೆ ಸಮಸ್ಯೆ ಕೇವಲ ಮೂಲಭೂತ ಸೌಕರ್ಯದ ಕೊರತೆ ಮಾತ್ರವಲ್ಲ, ಈ ಭಾಗದ ಸೂಕ್ಷ್ಮತೆಯ ಪ್ರತೀಕವೂ ಆಗಿದೆ. 2003ರಲ್ಲಿ ಕಾರ್ಕಳದ ಈದುವಿನಲ್ಲಿ ನಡೆದ ಪೊಲೀಸ್-ನಕ್ಸಲ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಯಶೋಧ, 2017ರಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾದ ಕನ್ಯಾಕುಮಾರಿ, ಮತ್ತು 2021ರಲ್ಲಿ ಪೊಲೀಸರಿಂದ ಬಂತರಾಗಿ ಕೇರಳದ ಜೈಲಿನಲ್ಲಿರುವ ಸಾವಿತ್ರಿ ಇವರೆಲ್ಲರೂ ಇದೇ ಮುಜೆಕಾನು ಗ್ರಾಮದ ಕರ್ನಾಳಿ-ಗುಬ್ಬಿ ಗೇದಿಗೆ ಗಿರಿಜನ ಕಾಲನಿಯ ನಿವಾಸಿಗಳು ಎಂಬುದು ಗಮನಾರ್ಹ.
ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ 2023ರ ವಿಧಾನಸಭಾ ಚುನಾವಣೆಯನ್ನೂ ಬಹಿಷ್ಕರಿಸಿದ್ದರು. ಈ ವೇಳೆ ಚುನಾವಣೆಯಲ್ಲಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲು ಬಂದ ತಹಸೀಲ್ದಾರ್ ಅವರ ವಾಹನವು ರಸ್ತೆಯಲ್ಲಿ ಬರಲು ಸಾಧ್ಯವಾಗದೆ ಆಟೋ ರಿಕ್ಷಾದಲ್ಲಿ ಬರಬೇಕಾದ ಪರಿಸ್ಥಿತಿ ಬಂದಿತ್ತು. ಈ ಘಟನೆಯು ರಸ್ತೆಯ ಭೀಕರ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.