ಜಿಲ್ಲೆ

ನಕ್ಸಲ್ ಚಟುವಟಿಕೆ ಮುಖ್ಯಮಂತ್ರಿ ಗಮನಕ್ಕೆ ತಂದಿರುವೆ

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿರುವ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗೃಹ ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು ಅವರು ಲಭ್ಯವಾಗಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಅರಣ್ಯ ಇಲಾಖೆಯ ವಿವಿಧ ಕಾನೂನುಗಳಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಲೆತಲಾಂತರದಿಂದ ಬದುಕು ಕಟ್ಟಿಕೊಂಡವರಿಗೆ ಮೂಲಸೌಕರ್ಯಗಳನ್ನು ಕೊಡಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಬದುಕಿಗಾಗಿ ಸಣ್ಣಪುಟ್ಟ ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸುವ ಹುನ್ನಾರದ ಹಿನ್ನೆಲೆಯಲ್ಲಿ ನಕ್ಸಲ್ ಚಟುವಟಿಕೆ ಮುನ್ನೆಲೆಗೆ ಬಂದಿದೆ ಎಂದು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಶೃಂಗೇರಿ ಕ್ಷೇತ್ರದಲ್ಲಿ ಎಲ್ಲಿಯೂ ಒತ್ತುವರಿ ತೆರವು ಮಾಡಿಲ್ಲ. ಆದರೆ ಕೆಲವರು ಸುಮ್ಮನೇ ಒತ್ತುವರಿ ತೆರವು ಮಾಡಿದ್ದಾರೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಿಯೂ ತೆರವು ಬೇಡ ಎಂದು ಹೇಳಲಾಗಿದೆ. ಕೆಲವರಿಗೆ ಮನೆ ಕಟ್ಟಲಿಕ್ಕೂ ಜಾಗ ಇಲ್ಲ. ಇರುವ ಜಾಗವನ್ನೆಲ್ಲ ಅರಣ್ಯ ಎಂದು ನಮೂದು ಮಾಡಿದ್ದಾರೆ. ಅವೈಜ್ಞಾನಿಕವಾಗಿ ಅರಣ್ಯವನ್ನು ಮೀಸಲು ಮಾಡಿರುವುದು, ಒಂದೇ ಸರ್ವೇ ನಂಬರಿನ ಅರಣ್ಯವನ್ನು ಡೀಮ್ಡ್ ಫಾರೆಸ್ಟ್, 4/1 ನೋಟಿಫಿಕೇಶನ್ ಮಾಡಿರುವುದರಲ್ಲಿ ಗೊಂದಲವಿದೆ. ಈ ಬಗ್ಗೆ ಟಾಸ್ಕ್‌ಪೋರ್ಸ್ ಸಮಿತಿ ರಚನೆ ಮಾಡಲು ಶೇ.75 ಕೆಲಸ ಮುಕ್ತಾಯಗೊಂಡಿದ್ದು, ಶೇ.25 ಸರ್ಕಾರಿ ಆದೇಶವಾದಲ್ಲಿ ಇದರಲ್ಲಿ ಅರ್ಹರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿದೆ ಎಂದರು.

ಮಳೆ ಸ್ಥಗಿತವಾಗಿರುವುದರಿಂದ ಜಂಗಲ್ ಕ್ಲಿಯರ್ ಆರಂಭಗೊಂಡಿದೆ. ಕ್ಷೇತ್ರಾದ್ಯಂತ 10-15 ಜೆಸಿಬಿಗಳು ಮುಖ್ಯರಸ್ತೆ ಬದಿ ನಿರಂತರವಾಗಿ ಕೆಲಸ ಮಾಡುತ್ತಿವೆ. ಚಿಕ್ಕಮಗಳೂರಿನಲ್ಲಿ ಪಿಡಬ್ಲುೃಡಿ ಅಧಿಕಾರಿಗಳ ಸಭೆಯನ್ನು ಶೃಂಗೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಸಲಾಗಿದೆ. ಭೂಮಿ ಸಂಪೂರ್ಣವಾಗಿ ಒಣಗಿದ ನಂತರ ಗುಂಡಿ ಮುಚ್ಚಲಾಗುವುದು. ರಸ್ತೆಯಲ್ಲಿರುವ ಗುಂಡಿಯನ್ನು ಅಗೆದು ಚೌಕಾಕಾರ ಹಾಗೂ ಆಯತಾಕಾರ ಮಾಡಿ ಮುಚ್ಚಲಾಗುವುದು. ಎಲ್ಲಾದರೂ ನೇರವಾಗಿ ಗುಂಡಿ ಮುಚ್ಚಿದ್ದು ಕಂಡರೆ ತಕ್ಷಣ ಮಾಹಿತಿ ನೀಡಿ, ನಾನೇ ಸ್ಥಳಕ್ಕೆ ಬಂದು ನಿಂತು ಗುಂಡಿ ಕಿತ್ತು ಪುನಃ ಸರಿಯಾಗಿ ಮುಚ್ಚಿಸುತ್ತೇನೆ ಎಂದು ಹೇಳಿದರು.

ಕ್ಷೇತ್ರಕ್ಕೆ ಗುಂಡಿ ದುರಸ್ತಿ ಮಾಡುವವರ ತಂಡ ಬಂದಿದೆ. ಜ.15ರೊಳಗೆ ಕ್ಷೇತ್ರಾದ್ಯಂತ ಪಿಡಬ್ಲುೃಡಿ ರಸ್ತೆಗಳ ಗುಂಡಿ ಮುಚ್ಚಿಸಲಾಗುವುದು. ಪಿಆರ್‌ಇಡಿ ರಸ್ತೆಗಳ ದುರಸ್ತಿಗೆ ಸಾಕಷ್ಟು ಅನುದಾನವಿದೆ. ಆದರೂ ಅದು ಸಾಕಾಗಲ್ಲ ಎಂದು ತಿಳಿಸಿದ್ದು, ಹೆಚ್ಚಿನ ಹಣ ಕೇಳಲಾಗಿದೆ. ಗ್ರಾಮೀಣ ಭಾಗದಲ್ಲಿ ಹೊಸ ರಸ್ತೆ ಮಾಡುವುದಕ್ಕಿಂತ ಮೊದಲು ಇರುವ ರಸ್ತೆಯ ಗುಂಡಿ ಮುಚ್ಚುವುದು, ದುರಸ್ತಿ ಕಾರ್ಯವನ್ನು ಮೊದಲ ಆದ್ಯತೆಯಾಗಿ ಮಾಡಲಾಗುವುದು. ಉಳಿದ ಹಣದಲ್ಲಿ ಹೊಸ ರಸ್ತೆಗಳ ಕೆಲಸ ಮಾಡಲಾಗುವುದು ಎಂದರು.

ಅಡಕೆ ಕೊಳೆ ರೋಗದ ಕುರಿತು ಪರಿಹಾರಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಮಾತನಾಡಲಾಗಿದ್ದು, ಸೂಕ್ತವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ರೈತರ ನಿಯೋಗ ತೆರಳಿ ಅವರೊಂದಿಗೆ ಮಾತನಾಡಲಾಗುವುದು. ಕಳೆದ ಸಾಲಿಗಿಂತ ಶೇ.30 ಮಳೆ ಅಧಿಕವಾಗಿದ್ದು, ಈ ಬಗ್ಗೆ ಮಲೆನಾಡು ಭಾಗದ ಎಲ್ಲ ಶಾಸಕರೂ ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿಯೊಂದಿಗೆ ಮಾತನಾಡಲಾಗಿದೆ. ಕಡೂರಿನಲ್ಲಿ ನ.25ರಂದು ಜನಸಂಪರ್ಕ ಸಭೆಯಿದ್ದು, ಅಲ್ಲಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೂ ಮಾತನಾಡಲಾಗುವುದು ಎಂದು ಹೇಳಿದರು.