ಬಸವಕಲ್ಯಾಣ: ಆಧುನಿಕ ತಂತ್ರಜ್ಞಾನ ಬಳಸಿ ಭೂ ದಾಖಲೆಗಳನ್ನು ಸಮೀಕ್ಷೆ ಮಾಡುವ ಕೇಂದ್ರದ ಸರ್ಕಾರದ ಮಹತ್ವದ್ದ ಯೋಜನೆಗೆ ಬಸವಕಲ್ಯಾಣ ಆಯ್ಕೆಯಾಗಿದೆ ಎಂದು ಸಹಾಯಕ ಆಯುಕ್ತ ಮುಕುಲ್ ಜೈನ್ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ ಹಾಗೂ ಭೂಮಾಪನಾ ಇಲಾಖೆ ಬೀದರ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸರ್ವೇಯಿಂದ ಆಸ್ತಿಯ ನಿಖರತೆ ಸಿಗುವ ಜತೆಗೆ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಅನುಕೂಲವಾಗುತ್ತದೆ ಎಂದರು.
ರಾಜ್ಯದ ೧೦ ನಗರ ಹಾಗೂ ಪಟ್ಟಣಗಳ ಪೈಕಿ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರ ಸಭೆ ಈ ಯೋಜನೆಯಡಿ ಆಯ್ಕೆಯಾಗಿದೆ. ಸರ್ಕಾರದ ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವ ಅವಶ್ಯಕ. ಈ ಯೋಜನೆಯಡಿ ಮನೆಗೆ ಸರ್ವೇಗೆ ಬರುವ ಸಿಬ್ಬಂದಿಗೆ ಸಾರ್ವಜನಿಕರು ಅಗತ್ಯ ದಾಖಲೆಗಳ ಮಾಹಿತಿ ನೀಡಿ ಸಹಕರಿಸಬೇಕು ಎಂದು ಹೇಳಿದರು.
ಸರ್ವೇ ಆಫ್ ಇಂಡಿಯಾ ಯೋಜನೆ ನೋಡಲ್ ಅಧಿಕಾರಿ ರಮೇಶ ಮಾತನಾಡಿ, ದೇಶದ ೧೫೨ ಕಡೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಯಶಸ್ವಿನ ನಂತರ ಎಲ್ಲ ಕಡೆಗಳಲ್ಲಿಯೂ ಜಾರಿಯಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷ ಎಂಡಿ. ಸಗೀರೋದ್ದಿನ್ ಮಾತನಾಡಿ, ಸಮೀಕ್ಷೆಗೆ ಬಂದಾಗ ಅಗತ್ಯ ಮಾಹಿತಿ ನೀಡಿ, ಯೋಜನೆ ಯಶಸ್ವಿಗೊಳಿಸಬೇಕು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಬೀದರ್ ಜಿಲ್ಲೆ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಶಂಕರ ಯೋಜನೆ ಕುರಿತು ಮಾಹಿತಿ ನೀಡಿದರು. ನಗರಸಭೆ ಸದಸ್ಯ ಗಫಾರ್ ಪೇಶಮಾಮ್ ಮಾತನಾಡಿದರು.
ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ್ ದತ್ತಾತ್ರೇಯ ಗಾದಾ ವಂದಿಸಿದರು.
ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ, ಸಿಪಿಐ ಅಲಿಸಾಬ್, ಎಇಇ ರಿಯಾಜ್, ನಗರಸಭೆ ಸದಸ್ಯರಾದ ಮೂಸಾಮಿಯಾ, ಮೀನಾ ಗೊಡಬೋಲೆ, ಅಬ್ದುಲ್ ಕರೀಮ, ಮೋಯಿನ್‌ಪಾಶಾ, ಸಮೀಯೋದ್ದಿನ್, ಮೊಯಿಯೋದ್ದಿನ್, ರಾಮ ಜಾಧವ್, ರವೀಂದ್ರ ಬೋರಾಳೆ, ದೀಪಕ ಗುಡ್ಡಾ, ಪವನ ಗಾಯಕವಾಡ, ಅಮ್ಜದಲಿ ನವರಂಗ, ಶಹಾಜಹಾನ್ ತನ್ವೀರ್ ಅಹ್ಮದ್, ಇಮ್ರಾನ್ ಖಾನ್, ಯುವರಾಜ ಭೆಂಡೆ, ಡಾ.ಖದೀರೋದ್ದಿನ್, ನಯಿಮೋದ್ದಿನ್ ಜಾಗೀರದಾರ್ ಇತರರಿದ್ದರು.