ಜಿಲ್ಲೆ

ನಕಾರಾತ್ಮಕ ವಿಚಾರಗಳಿಂದ ದೂರ ಇರಿ

ಕಲಬುರಗಿ: ಮಕ್ಕಳ ಬಗ್ಗೆ ನಕಾರಾತ್ಮಕ ವಿಚಾರಗಳ ಬಗ್ಗೆ ಮಾತಾಡದೆ ಪ್ರೋತ್ಸಾಹ ನೀಡಬೇಕು. ಪ್ರೋತ್ಸಾಹದ ಬಹುದೊಡ್ಡ ಅಸ್ತ್ರ ಶಿಕ್ಷಣ. ನಾವು ಯಾವ ಜಾತಿ, ಧರ್ಮ, ಸ್ಥಿತಿಯಲ್ಲಿ ಬದುಕಿದ್ದೇವೆ ಎಂಬುದನ್ನು ಮೀರಿ ಸಮಾನತೆ ತರುವುದು ಶಿಕ್ಷಣ ಮಾತ್ರ. ಶಿಕ್ಷಣ ಒಬ್ಬರ, ಕುಟುಂಬದ ಭವಿಷ್ಯ ಮಾತ್ರವಲ್ಲ ಸಮಾಜದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಶಿಕ್ಷಣ ನೀಡುತ್ತದೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ ಹೇಳಿದರು.

ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ರಾಜ್ಯ ಈಡಿಗ ಸರ್ಕಾರಿ/ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂದಿಂದ ಭಾನುವಾರ ಏರ್ಪಡಿಸಿದ್ದ ಈಡಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಸಾಧಕ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳನ್ನು ಸನ್ಮಾರ್ಗದತ್ತ ಒಯ್ಯುವ ಎಲ್ಲ ಅವಕಾಶ, ವ್ಯವಸ್ಥೆಗಳು ನಮ್ಮಲ್ಲಿ ಇವೆ. ಅನಾವಶ್ಯಕ ವಿಷಯಗಳು, ದುಶ್ಚಟಗಳಿಂದ ದೂರ ಇದ್ದು, ಸದೃಢ ವ್ಯಕ್ತಿತ್ವ ರೂಪಿಸಬೇಕು ಎಂದು ಹೇಳಿದರು.

ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಶ್ರೀನಿವಾಸ ಎಂ. ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ತಪ್ಪು ದಾರಿಯಿಂದ ಮಕ್ಕಳನ್ನು ರಸುವ ದೊಡ್ಡ ಜವಾಬ್ದಾರಿ ಪೋಷಕರಿಗೆ ಇದೆ. ಪ್ರತಿಯೊಬ್ಬರು ಜ್ಞಾನಿಗಳಾಗಿದ್ದು, ಯಾವುದೇ ಕ್ಷಣದಲ್ಲೂ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ನಮ್ಮಲ್ಲಿದೆ. ಶಿಸ್ತು ಮತ್ತು ಕೆಲಸ ಮಾಡುವ ಛಲ ಇಲ್ಲದಿದ್ದರೆ ದೊಡ್ಡ ಕನಸು ನನಸಾಗದೆ ಉಳಿಯುವುದಿಲ್ಲ ಎಂದು ಹೇಳಿದರು.

ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಮಾತಾ ಸಂಗೀತೇಶ್ವರಿ, ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ್​, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​, ಸಂದ ಜಿಲ್ಲಾಧ್ಯಕ್ಷ ರಾಜಕುಮಾರ ಗುತ್ತೇದಾರ್​, ಪ್ರಧಾನ ಕಾರ್ಯದರ್ಶಿ ನರಸಯ್ಯ ಗುತ್ತೇದಾರ್​, ರವೀಂದ್ರ ಬೊರಳೆ, ಚಂದ್ರಕಾಂತ ರಾವೂರ, ಶಶಿಧರ ಗುತ್ತೇದಾರ್​ ಇತರರಿದ್ದರು.