ಜಿಲ್ಲೆ

ನಕಾರಾತ್ಮಕ ಭಾವನೆಯವರು ಸಮಾಜದ ಭಯೋತ್ಪಾದಕರು

ಮೈಸೂರು: ನಕಾರಾತ್ಮಕ ಭಾವನೆಯವರು ಸಮಾಜದ ಭಯೋತ್ಪಾದಕರು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಿಸಿದರು.

ಶಿವಯೋಗ ದೇಸಿ ಗೋಶಾಲೆ ವತಿಯಿಂದ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಾಸಿಟಿವ್ ತಮ್ಮಯ್ಯ ಅವರ ‘ನಮ್ಮ ಆರೋಗ್ಯ, ನಮ್ಮ ಆಹಾರ, ನಮ್ಮ ಜವಾಬ್ದಾರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಯೋತ್ಪಾದಕರು 50-100 ಜನರನ್ನು ಸಾಯಿಸಬಹುದು. ಆದರೆ, ನಕಾರಾತ್ಮಕ ಭಾವನೆಯ ಭಯೋತ್ಪಾದಕರು ಇಡೀ ಸಮುದಾಯ, ಸಮಾಜವನ್ನೇ ಸಾಯಿಸುತ್ತಾರೆ. ಎಷ್ಟೇ ಬುದ್ಧಿವಂತರು, ದೊಡ್ಡ ಹುದ್ದೆಯಲ್ಲಿದ್ದರೂ ಇಂಥವರಿಂದ ಸಮಾಜ ಪ್ರಗತಿ ಆಗಲ್ಲ ಎಂದರು.
ಜೀವನದಲ್ಲಿ ಸಕಾರಾತ್ಮಕ ಭಾವನೆಯಿಂದ ಮಾನಸಿಕ, ದೈಹಿಕ, ಸಮಾಜದ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಗಲಿದೆ. ವೃತ್ತಿ-ಪ್ರವೃತ್ತಿಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬರೂ ಪಾಸಿಟಿವ್ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಕೆಎಂಎಫ್‌ನ ನಂದಿನಿ ಉತ್ಪನ್ನಗಳು, ತೋಟಗಾರಿಕೆ ಇಲಾಖೆಯ ಹಾಪ್‌ಕಾಮ್ಸ್ ಸಂಸ್ಥೆಯ ಹಣ್ಣು, ತರಕಾರಿಗಳು ಆರೋಗ್ಯದ ಸಂಗಮವಾಗಿವೆ. ಇವುಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಬಹುದು. ದೇಶದಲ್ಲಿ ಶೇ.11ರಷ್ಟು ಜನರು ತರಕಾರಿ, ಹಣ್ಣುಗಳನ್ನು ಸೇವನೆ ಮಾಡಲ್ಲ. ಜಗತ್ತಿನ ಹಸಿವಿನ ಸೂಚ್ಯಾಂಕದಲ್ಲಿ ಭಾರತ ಬಹಳಷ್ಟು ಹಿಂದೆ ಉಳಿದಿದೆ. ಮತ್ತೊಂದೆಡೆ, ದೇಶದಲ್ಲಿ ವರ್ಷಕ್ಕೆ 90 ಸಾವಿರ ಕೋಟಿ ರೂ. ಮೊತ್ತದಷ್ಟು ಆಹಾರ ಪೋಲಾಗುತ್ತಿದೆ. ಮದುವೆ, ಸಭೆ-ಸಮಾರಂಭ, ಪಂಚತಾರಾ ಹೋಟೆಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ನಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬದಲಾದ ಜೀವನ ಶೈಲಿ, ಆಹಾರದಿಂದಲೇ ಶೇ.60ರಷ್ಟು ಕಾಯಿಲೆಗಳು ಬರುತ್ತಿವೆ. ಹೃದಯ ಸಂಬಂಧಿ ರೋಗಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಕಾಯಿಲೆಗೂ ಕಾರಣವಾಗುತ್ತಿದೆ. ಪಾಶ್ಚಿಮಾತ್ಯ ದೇಶಕ್ಕಿಂತ 10-15 ವರ್ಷ ಮೊದಲು ಭಾರತದಲ್ಲಿ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದರು.

ಕಾಲ ಬದಲಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಕಾಲ ಬದಲಾಗಿಲ್ಲ. ಜನರು ಬದಲಾಗಿದ್ದಾರೆ. ಅವರ ಅಪೇಕ್ಷೆಗಳು, ನಿರೀಕ್ಷೆಗಳು ಬದಲಾಗಿವೆ. ಆಸೆಗಳಿಗೆ ಇತಿಮಿತಿಯೇ ಇಲ್ಲವಾಗಿದೆ. ಅನೇಕ ಪದವಿ ಪಡೆದವರಲ್ಲಿ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ. ಮಾಡಬಾರದ್ದನ್ನು ಮಾಡಿದರೆ, ತಿನ್ನಬಾರದ್ದನ್ನು ತಿಂದರೆ, ಆಗಬಾರದು ಆಗುತ್ತದೆ. ಇದಕ್ಕೆ ಕರೊನಾ ಉತ್ತಮ ಉದಾಹರಣೆ ಎಂದರು.

ಕೋವಿಡ್ ಬಳಿಕವೇ ನಮಗೆಲ್ಲ ಆಮ್ಲಜನಕ ಮಹತ್ವ ಗೊತ್ತಾಗಿದೆ. ಪ್ರಕೃತಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿಯನ್ನು ಕೆಣಕಿದರೆ ಪರಿಣಾಮ ಬೇರೆಯೇ ಆಗಿರುತ್ತದೆ. ಸಾಂಕ್ರಾಮಿಕ ರೋಗಗಳು, ಜಲಪ್ರಳಯ, ಭೂಕಂಪ ಇನ್ನಿತರರ ಪ್ರಕೃತಿ ವಿಕೋಪವನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಸರ ಮಾಲಿನ್ಯವೇ ಮುಖ್ಯ ಕಾರಣವಾಗಿದೆ ಎಂದು ಎಚ್ಚರಿಸಿದರು.

ವಾಯುಮಾಲಿನ್ಯ ಹೃದಯ ರೋಗಕ್ಕೆ ಹೊಸ ಕಾರಣವಾಗಿದೆ. ದೇಶದಲ್ಲಿ ಕಳೆದ ವರ್ಷ 22 ಲಕ್ಷ ಜನರು ಈ ಮಾಲಿನ್ಯದಿಂದಲೇ ಮೃತಪಟ್ಟಿದ್ದಾರೆ. ವಾಯುಮಾಲಿನ್ಯ ಇದೀಗ ಹೊಸ ಸಿಗರೇಟಿನಂತಾಗಿದೆ ಎಂದರು.

ಬದಲಾದ ಕಾಲದಲ್ಲಿ ಹಣ ಗಳಿಕೆ ಹೆಚ್ಚು- ಮನಃಶಾಂತಿ ಕಡಿಮೆ, ಗರಿಷ್ಠ ಜನಸಂಖ್ಯೆ- ಮಾನವೀಯತೆ ಕಡಿಮೆ, ಬುದ್ಧಿವಂತಿಕೆ ಹೆಚ್ಚು- ಭಾವನೆಗಳು ದೂರ, ವಿಲ್ ಪವರ್ ಕಡಿಮೆ- ವಿಸ್ಕಿ ಪವರ್ ಹೆಚ್ಚಾಗಿದೆ. ಇದೆಲ್ಲ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಮಾಜಿ ಶಾಸಕ ವಾಸು, ಕೃಷಿ ಗ್ರಾಮೀಣಾಭಿವೃದ್ಧಿ ತಜ್ಞ ಕೆ.ಪಿ.ಸುರೇಶ್, ಪ್ರಕೃತಿ ಚಿಕಿತ್ಸಾ ಕಾರ್ಯಕರ್ತ ಕೆ.ಎಸ್.ಗಿರಿರಾಜು, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಹಜ ಕೃಷಿಕ ಪಾಸಿಟಿವ್ ತಮ್ಮಯ್ಯ ಇನ್ನಿತರರಿದ್ದರು.