ಜಿಲ್ಲೆ

ನಕಲುಮುಕ್ತ ಪಿಯು ಪೂರಕ ಪರೀಕ್ಷೆ ನಡೆಯಲಿ

ಬೀದರ್: ದ್ವಿತೀಯ ಪಿಯುಸಿಯ 2ನೇ ಪೂರಕ ಪರೀಕ್ಷೆ ಸೋಮವಾರದಿಂದ ಸೆ.2ರವರೆಗೆ ಜಿಲ್ಲೆಯ 11 ಕೇಂದ್ರಗಳಲ್ಲಿ ನಡೆಯಲಿದ್ದು, ನಕಲುಮುಕ್ತ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಗಳ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ನಕಲು ನಡೆಯದಂತೆ ಆಯಾ ಕಾಲೇಜಿನ ಪ್ರಾಂಶುಪಾಲರು, ಕಸ್ಟೋಡಿಯನ್ ಮತ್ತು ಪರೀಕ್ಷಾ ವೀಕ್ಷಕರು ಮುಂಜಾಗ್ರತೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಮುಂಚಿತವಾಗಿ ಕೇಂದ್ರಗಳಲ್ಲಿ ಹಾಜರಿರಬೇಕು. ಪ್ರಶ್ನೆ ಪತ್ರಿಕೆ ಸಂಗ್ರಹ ಮತ್ತು ರವಾನೆ ಬಹಳ ಜಾಗರೂಕತೆಯಿಂದ ಮಾಡಬೇಕು. ಪರೀಕ್ಷಾ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ, ಇ-ಕ್ಯಾಮರಾ, ಲ್ಯಾಪ್ಟಾಪ್ ಇತ್ಯಾದಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ. ಕೇಂದ್ರದ ಸುತ್ತಲಿನ 200 ಮೀಟರ್ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಸ್ಥಳದಲ್ಲಿರುವ ಜೆರಾಕ್ಸ್ ಹಾಗೂ ಟೈಪಿಂಗ್ ಸೆಂಟರ್ ಮುಚ್ಚಲು ಆದೇಶಿಸಲಾಗಿದೆ ಎಂದರು.
ಬೀದರ್ ನಗರದಲ್ಲಿ 4, ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿಗಳಲ್ಲಿ ತಲಾ ಎರಡು ಹಾಗೂ ಔರಾದ್ ನಲ್ಲಿ ಒಂದು ಸೇರಿ ಜಿಲ್ಲಾದ್ಯಂತ 11 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 12,260 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮಧ್ಯಾಹ್ನ 2.15ರಿಂದ 5.30ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಗಳು ಮಧ್ಯಾಹ್ನ 1.15ಕ್ಕೆ ಕೇಂದ್ರಗಳ ಒಳಗಡೆ ಇರಬೇಕು ಮತ್ತು ಪ್ರಶ್ನೆ ಪತ್ರಿಕೆಗಳನ್ನು ತರಲು ಯಾರಿಗೆ ಜವಾಬ್ದಾರಿ ನೀಡಲಾಗಿದೆಯೋ ಅವರೇ ಬಂದು ತೆಗೆದುಕೊಂಡು ಹೋಗಬೇಕು. ಅವರ ಪರವಾಗಿ ಬೇರೆಯವರು ಬರುವಂತಿಲ್ಲ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಹಾಯಕರು ಹಾಗೂ ಬಂದೋಬಸ್ತ್ ಗೆ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಯಾವುದೇ ಕಾಲೇಜಿನಲ್ಲಿ ನಕಲು ಮತ್ತಿತರ ಅಹಿತಕರ ಘಟನೆ ನಡೆದಿರುವ ಕುರಿತು ದೂರುಗಳು ಬಂದರೆ ಸಂಬಂಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ಹಿಂದೆ ಭಾಲ್ಕಿಯಲ್ಲಿ ನಡೆದ ಘಟನೆ ಎಲ್ಲ ಅಧಿಕಾರಿಗಳಿಗೆ ನೆನಪಿರಬಹುದು. ಅಂಥ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಮಹೇಶ ಮೇಘಣ್ಣವರ್, ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ್, ಪದವಿಪೂರ್ವ ಶಿಕ್ಷಣ ಉಪ ನಿರ್ದೇಶಕ ಚಂದ್ರಕಾಂತ ಶಾಬಾದಕರ್ ಇತರರಿದ್ದರು.