ಗದಗ: ಶನಿವಾರ ಜರುಗಿದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಆರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಅವಳಿನಗರದ ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪ್ರತಿ ಕೊಠಡಿಗಳಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸುವಾಗ ನಕಲು ಮಾಡುತ್ತಿದ್ದ ಆರು ವಿದ್ಯಾರ್ಥಿಗಳನ್ನು ಡಿಬಾರ್ ಆಗಿದ್ದಾರೆ. ನಗರದ ಮುನ್ಸಿಪಲ್ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಮೂವರು ಹಾಗೂ ಬೆಟಗೇರಿಯ ಬಾಸೆಲ್ ಮಿಷನ್ ಪರೀಕ್ಷಾ ಕೇಂದ್ರದಲ್ಲಿ ಮೂವರು ಸೇರಿ ಒಟ್ಟು ಆರು ವಿದ್ಯಾರ್ಥಿಗಳ ಡಿಬಾರ್ ಆಗಿದ್ದಾರೆ.
564 ವಿದ್ಯಾರ್ಥಿಗಳ ಗೈರು: ಜಿಲ್ಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಗೆ ನೋಂದಣಿಯಾಗಿದ್ದ 14,416 ವಿದ್ಯಾರ್ಥಿಗಳ ಪೈಕಿ 13,852 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 564 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದರಲ್ಲಿ ಕೋವಿಡ್-19 ಪ್ರತಿಬಂಧಿತ ಪ್ರದೇಶದಿಂದ 88 ವಿದ್ಯಾರ್ಥಿಗಳು, 409 ವಲಸೆ ವಿದ್ಯಾರ್ಥಿಗಳ ಪೈಕಿ 393 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕಂಟೇನ್ಮೆಂಟ್ ಪ್ರದೇಶದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ತಿಳಿಸಿದ್ದಾರೆ.
ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ : ಜಿಲ್ಲೆಯಲ್ಲಿ 7 ಉಪಕೇಂದ್ರ ಸೇರಿ ಒಟ್ಟು 65 ಪರೀಕ್ಷಾ ಕೇಂದ್ರಗಳಲ್ಲಿ ಗಣಿತ ಪರೀಕ್ಷೆ ನಡೆಯಿತು. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬೆಳಗ್ಗೆ 9.30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು. ಒಬ್ಬೊಬ್ಬರನ್ನು ಕರೆದು ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ಪರೀಕ್ಷಿಸಿ, ಅವರ ಕೈಗೆ ಸ್ಯಾನಿಟೈಸರ್ ಹಾಕಿ ಕೊಠಡಿಯೊಳಗೆ ಬಿಡಲಾಯಿತು. ಪರೀಕ್ಷೆಗೆ ಮುನ್ನ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಿದರು. ಆದರೆ, ಪರೀಕ್ಷೆ ಮುಗಿದ ನಂತರ ಕೊಠಡಿಯಿಂದ ಹೊರಗೆ ಬಂದ ವಿದ್ಯಾರ್ಥಿಗಳು ಗುಂಪು ಗುಂಪಾಗಿ ನಿಂತು ಮಾತನಾಡುವುದು. ಮಾಸ್ಕ್ ಇಲ್ಲದೇ ಮಾತನಾಡುತ್ತಿರುವುದು ಕಂಡುಬಂದಿತು.
ಪರೀಕ್ಷೆಯಿಂದ ಹೊರಗುಳಿದ ಮಕ್ಕಳು
ಲಕ್ಷ್ಮೇಶ್ವರ: ಪಟ್ಟಣದ ಕಿವುಡ ಮತ್ತು ಮೂಕ ಮಕ್ಕಳ ಖಾಸಗಿ ವಸತಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತ ವಿದ್ಯಾರ್ಥಿ ಮತ್ತು ಆತನ ಸಂಪರ್ಕ ಹೊಂದಿದ 19 ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿಯಬೇಕಾಯಿತು. ಅವರಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಡಿಡಿಪಿಐ ಎನ್.ಎಚ್. ನಾಗೂರ ತಿಳಿಸಿದ್ದಾರೆ.
ಈ ವಿಶೇಷ ಶಾಲೆಯ ಮಕ್ಕಳಿಗೆ ಕೇವಲ 4 ವಿಷಯಗಳ ಮೇಲೆ ಪರೀಕ್ಷೆ ಇದ್ದು ಜೂ.27 ರ ಶನಿವಾರ ಪ್ರಾರಂಭವಾಗಿವೆ. ಆದರೆ ಜೂ.24 ಕ್ಕೆ ಬಿಜಾಪುರ ಮೂಲದ ಈ ಶಾಲೆಯ ವಿದ್ಯಾರ್ಥಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇನ್ನುಳಿದ 19 ವಿದ್ಯಾರ್ಥಿಗಳ ಗಂಟಲ ದ್ರವ ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿದ್ದರಿಂದ ಈ 19 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಮೊದಲು ತಿಳಿಸಿದ್ದರು. ಆದರೆ, ಶನಿವಾರ ಈ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಈ ಕುರಿತು ಡಿಡಿಪಿಐ ಎನ್.ಎಚ್. ನಾಗೂರ ಅವರನ್ನು ಕೇಳಿದಾಗ, ‘ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸುತ್ತೋಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಯಾಗಲಿ ಮತ್ತು ಕ್ವಾರಂಟೈನ್ನಲ್ಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು. ಇಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಮತ್ತು ಅದನ್ನು ಪ್ರಥಮ ಅವಕಾಶ ಎಂದು ಪರಿಗಣಿಸಲಾಗುವುದು. ಅವರ ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದೆ. ಈ ಹಿನ್ನೆಲೆ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.