ಜಿಲ್ಲೆ

ನಕಲಿ ಸೈಟ್ ದಾಖಲೆ ತೋರಿಸಿ ನಿವೃತ್ತ ಡಿವೈಎಸ್ಪಿ ಪುತ್ರನಿಗೆ ಮಕ್ಮಲ್ ಟೋಪಿ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಿವೃತ್ತ ಡಿವೈಎಸ್ಪಿ ಸಹೋದರನ ಪುತ್ರನಿಗೆ  ಇಲ್ಲಿನ ಕುಸನೂರ ಗ್ರಾಪಂ ವ್ಯಾಪ್ತಿಯ ಬಡಾವಣೆಯ ನಿವೇಶನದ ನಕಲಿ ದಾಖಲೆಗಳನ್ನು ತೋರಿಸಿ ವ್ಯಾಪಾರ ಮಾಡಿ ಹಣ ಪಡೆದುಕೊಂಡು ಮೋಸ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿವೃತ್ತ ಡಿವೈಎಸ್ಪಿಯಾಗಿರುವ ಸಿದ್ರಾಮಪ್ಪ ಶರಣಪ್ಪ  ಅವರ ಸಹೋದರನ ಪುತ್ರ ಮಹಾಂತಪ್ಪ ಬಸವರಾಜ ತಳವಾರ ಎಂಬುವರೇ ಮೋಸ ಹೋದವರು.
೨೦೧೮ ರಲ್ಲಿ  ಮಹಾಂತಪ್ಪ ಬಳಿ ಬಂದ ಮಹ್ಮದ್ ಅಹ್ಮದುಲ್ಲಾ, ಮಹ್ಮದ ಗೌಸುದ್ಧೀನ್ ಹಾಗೂ ಇಮ್ರಾನ್ ಅಹ್ಮದ್ ಎಂಬ ಮೂವರು ಸೇರಿಕೊಂಡು ಕುಸನೂರಿನ ಸರ್ವೇ ನಂಬರ್ ೫೫/೨ ಎ ನಕಲಿ ದಾಖಲೆ ತೋರಿಸಿ  ಸೈಟ್ ವ್ಯವಹಾರ ಮುಗಿಸಿದ್ದಾರೆ. ನಿವೇಶನ ಬೆಲೆ ೯.೯೦ ಲಕ್ಷ ರೂ.ಗಳನ್ನು ಬ್ಯಾಂಕ್ ಲೋನ್ ಮಾಡಿಕೊಂಡು ಅವರಿಗೆ ನೀಡಲಾಯಿತು ಎಂದು ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ದೂರಿದ್ದಾರೆ.
ತೋರಿಸಿದ ಸೈಟ್‌ನಲ್ಲಿ ಬೊರ್‌ವೆಲ್ ಹಾಕಿದ ಕೆಲ ದಿನಗಳ ನಂತರ ಡಾ.ಶಿವಶಂಕರ ಹಾಲಕಾಯಿ ಎಂಬುವರು ಬಂದು, ಇದು ನಮ್ಮ ಜಾಗ ಎಂದು ಮೂಲ ದಾಖಲಾತಿ ಹಾಜರುಪಡಿಸಿದರು. ಆಗ ನಿವೇಶನ ಮಾರಿದ್ದ ಮಹ್ಮದ್ ಅಹ್ಮದುಲ್ಲಾ, ಮಹ್ಮದ ಗೌಸುದ್ಧೀನ್ ಹಾಗೂ ಇಮ್ರಾನ್ ಅಹ್ಮದ್‌ಗೆ ಹೇಳಿದಾಗ ಹಣ ಮರಳಿಸುವುದಾಗಿ ಹೇಳಿ ಇದುವರೆಗೂ ಮರಳಿಸಿಲ್ಲ. ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.