ಕಲಬುರಗಿ: ಜಿಲ್ಲೆಯಲ್ಲಿ ಕೆಪಿಎಂಇ ನೋಂದಣಿ ಇಲ್ಲದ ನಕಲಿ ವೈದ್ಯರ ಹಾವಳಿ ಹೆಚ್ಚಿದ್ದು, ಬಡವರ ಜೀವದ ಜತೆ ಚೆಲ್ಲಾಟ ಆಡುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಆಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿ ವೈದ್ಯರೆಂದು ಹೇಳಿಕೊಂಡು ಕ್ಲಿನಿಕ್‌ಗಳನ್ನು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರು ಸಾವಿರಕ್ಕಿಂತ ಅಧಿಕ ನಕಲಿ ವೈದ್ಯರಿದ್ದು, ನಿಯಮ ಬಾಹಿರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎರಡು ತಿಂಗಳ ಹಿಂದೆ ಸಾಕ್ಷಾÈದಾರಗಳ ಸಹಿತ ದೂರು ನೀಡಿದ್ದಾಗ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆಯೂ ನೋಂದಣಿ ಮಾಡುವಂತೆ ಆದೇಶಿಸಿತ್ತು. ಆದರೆ ಇದುವರೆಗೆ ನೋಂದಣಿಗಳು ಆಗಿಲ್ಲ. ಅರ್ಹ ವಿದ್ಯಾಭ್ಯಾಸ ಹೊಂದಿಲ್ಲ. ಕ್ರಮ ಕೈಗೊಳ್ಳಲು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ, ಶಾಸಕರು ತಡೆ ಹಿಡಿಯುತ್ತಿದ್ದಾರೆ ಎಂಬ ಮಾತುಗಳಿದ್ದು, ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ನಕಲಿಗಳ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯರನ್ನು ನೇಮಿಸಬೇಕು. ಸಮರ್ಪಕ ಸೇವೆ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರವೀಣ ಕಟ್ಟಿಮನಿ, ಮೆಹ್ತಾಬ್‌ಖಾನ್, ಸುರೇಶ ಹೊಸಮನಿ, ಅಪ್ಪು ಕ್ಷತ್ರಿ ಇತರರಿದ್ದರು.