ಜಿಲ್ಲೆ

ನಕಲಿ ವೈದ್ಯನಿಗೆ 3 ವರ್ಷ ಜೈಲು

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಸುಮಾರು 10 ವರ್ಷಗಳಿಂದ ಯಾವುದೇ ಅನುಮತಿ ಪಡೆಯದೆ ಮೂಲವ್ಯಾಧಿ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದ ವೈದ್ಯರೊಬ್ಬರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದ ರಸ್ತೆಯಲ್ಲಿದ್ದ ಪಾರ್ವತಿ ಕ್ಲಿನಿಕ್‌ನಲ್ಲಿ ಮನಿಷ್ ಕುಮಾರ್ ಸಿಕಾರ್ ಸುಮಾರು 10 ವರ್ಷಗಳಿಂದ ನಕಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದರು. ಮೂಲವ್ಯಾಧಿ, ಅಲೋಪತಿ ಚಿಕಿತ್ಸೆಯನ್ನು ಯಾವುದೇ ಲೈಸನ್ಸ್ ಇಲ್ಲದೆ ನೀಡುತ್ತಿದ್ದರು. ಈ ಸಂಬಂಧ ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುನೀತ್ ಬಾಬು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.

ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವೀಣಾನಾಯ್ಕ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನೂ ಸಲ್ಲಿಸಿದ್ದರು. ಈ ಸಂಬಂಧ ಜೆಎಂಎಫ್‌ಸಿ ನ್ಯಾಯಾಧೀಶರಾದ ಸುನೀತ್ ಅವರು ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಕಿಲ ವೈದ್ಯನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದುಂಡು ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಜೆ.ರವಿಸೆಂತಿಲ್ ವಾದ ಮಂಡಿಸಿದರು.