ಜಿಲ್ಲೆ

ನಕಲಿ ಮದ್ಯಕ್ಕೆ ಮೈಸೂರು ನಂಟು ; ಅಗ್ರಹಾರ ಗೇಟ್‌ನಲ್ಲಿ ಮದ್ಯ ಅಕ್ರಮ ಸಾಗಣೆ ; ತುಮಕೂರು ಅಬಕಾರಿ ಅಧಿಕಾರಿಗಳ ದಾಳಿ

ಕುಣಿಗಲ್ : ಕುಣಿಗಲ್ ತಾಲೂಕು ಅಗ್ರಹಾರ ಗೇಟ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುವಾಗ ಟಾಟಾ ಸುಮೋ ವಾಹನದ ಮೇಲೆ ಶನಿವಾರ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, ನಕಲಿ ಮದ್ಯ ತಯಾರಿಕಾ ಘಟಕವನ್ನು ಬಯಲಿಗೆಳೆದಿದ್ದಾರೆ.

ಮೈಸೂರಿನ ಪಂಡಿತ್ ದೀನದಯಾಳ್ ಉಪಾಧ್ಯಾಯ ನಗರದ ನಿವಾಸಿಗಳಾದ ಜನಾರ್ದನ (53), ಸುರೇಶ್ (46) ಹಾಗೂ ಶ್ರೀನಿವಾಸ್ (46) ಬಂಧಿತರು. 10.93 ಲಕ್ಷ ರೂ. ಮೌಲ್ಯದ 264 ಲೀಟರ್ ನಕಲಿ ಮದ್ಯ ಹಾಗೂ ಮದ್ಯ ತಯಾರಿಕೆಗೆ ಬಳಸುವ ಸಾಮಗ್ರಿ, ಸೀಲಿಂಗ್ ಮಷಿನ್ ವಶಪಡಿಸಿಕೊಂಡಿದ್ದಾರೆ.

ಆರೋಪಿ ಜನಾರ್ದನ ನೀಡಿದ ಮಾಹಿತಿ ಆಧಾರದ ಮೇಲೆ ತನಿಖೆ ಕೈಗೊಂಡ ತುಮಕೂರು ಅಬಕಾರಿ ಇಲಾಖೆ ಅಧಿಕಾರಿಗಳು ಸುರೇಶ್ ಮನೆಯಲ್ಲಿದ್ದ ನಕಲಿ ಮದ್ಯ ತಯಾರಿಕೆ ಘಟಕದ ಮೇಲೆ ದಾಳಿ ನಡೆಸಿ ಬಂಧಿಸಿದರು. ಆರೋಪಿಗಳಿಂದ 3 ಬೈಕ್, 7000 ಓಲ್ಡ್ ಟವರಿನ್ ವಿಸ್ಕಿಯ ನಕಲಿ ಖಾಲಿ ಟೆಟ್ರಾಪ್ಯಾಕ್, 7905 ನಕಲಿ ಅಡೆಸಿವ್ ಲೇಬಲ್‌ಗಳು, 4.5ಲೀ ನಕಲಿ ಮದ್ಯ, 600ಲೀ ಮದ್ಯಸಾರ, 45ಲೀ ನಕಲಿ ಬ್ಲೆಂಡ್ ಮದ್ಯ ಹಾಗೂ ನಕಲಿ ಮದ್ಯ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಉಪ ಆಯುಕ್ತೆ ಶೈಲಜಾ ಎ.ಕೋಟೆ ನಿರ್ದೇಶನದಂತೆ ಉಪ ಅಧೀಕ್ಷಕರಾದ ಕೆ.ಸಿ.ಸಿದ್ದಲಿಂಗಸ್ವಾಮಿ, ಎ.ಕೆ.ನವೀನ್ ನೇತೃತ್ವದ ಎರಡು ಪ್ರತ್ಯೇಕ ತಂಡ ದಾಳಿ ನಡೆಸಿದೆ.

ದಾಳಿ ಸಮಯದಲ್ಲಿ ಅಬಕಾರಿ ನಿರೀಕ್ಷಕರಾದ ಟಿ.ಜೆ.ದಿವ್ಯಶ್ರೀ, ಅರುಣ್‌ಕುಮಾರ್, ಸಿಬ್ಬಂದಿ ಕೆ.ಮಲ್ಲಿಕಾರ್ಜುನಯ್ಯ, ಕೆ.ಶಿವರಾಮ್, ಪ್ರಭಾಕರ್, ಲೀಲಾವೆಂಕಟೇಶ್, ಬಿ.ಎಂ.ಗಂಗಾಧರಯ್ಯ, ಜಿ.ವಿ.ತಿರುಮಲೇಗೌಡ, ವೈಜುನಾಥಮಲಘಾಣ, ಮಂಜುನಾಥ್ ಹಾಗೂ ವಾಹನ ಚಾಲಕ ಯೋಗೀಶ್, ಸಂತೋಷಕುಮಾರ್ ಇದ್ದರು.

ಮತ್ತೊಂದು ಪ್ರಕರಣದಲ್ಲಿ ಎಡೆಯೂರು ಹೋಬಳಿ ಪಾಕಶಾಲಾ ಹೋಟೆಲ್ ಮುಂಭಾಗದ ರಸ್ತೆ ಪಕ್ಕದಲ್ಲಿ ಮೈಸೂರು ನಗರದ ಶ್ರೀನಿವಾಸ್ ಎಂಬುವವನು ಆಟೋ ರಿಕ್ಷಾದಲ್ಲಿ 86 ಲೀ.,ನಕಲಿ ಮದ್ಯ ಸಾಗಿಸುವಾಗ ಅಬಕಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಎರಡೂ ಪ್ರಕರಣಗಳ ಜಾಡುಹಿಡಿದು ಮೈಸೂರಿನ ದಂಧೆ ಪತ್ತೆ ಮಾಡಲಾಗಿದೆ.