ಮುಧೋಳ ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ೨೦೨೩ರ ನವಂಬರ್ ತಿಂಗಳಲ್ಲಿ ಮದುವೆ ಆಗಿದ್ದ ಸೋಮಶೇಖರ ಹಾಗೂ ಮಂಜುಳಾ. 
ಜಿಲ್ಲೆ

ನಕಲಿ ಮದುವೆ ಮಾಡಿ ಯುವ ರೈತನಿಗೆ ವಂಚನೆ !

ಸಂತೋಷ ದೇಶಪಾಂಡೆ

ಬಾಗಲಕೋಟೆ: 4-5 ವರ್ಷ ಮದುವೆಯಾಗಲು ಕನ್ಯಾ ಹುಡುಕುತ್ತಿದ್ದ ರೈತ ಯುವಕನಿಂದ ಹಣ ದೋಚಲು ವಂಚಕರ ತಂಡವೊ0ದು ಈಗಾಗಲೇ ಎರಡು ಮದುವೆ ಆಗಿದ್ದ ಮಹಿಳೆಯನ್ನು ತಂದು ಮದುವೆ ಮಾಡಿಸಿ ಆತನಿಂದ ೪.೦೫ ಲಕ್ಷ ರೂ. ಪೀಕಿಕೊಂಡು ಪರಾರಿ ಆಗಿದ್ದಾರೆ. ಅತ್ತ ಮದುವೆಯಾದ ಮಹಿಳೆಯೂ ಒಂದು ತಿಂಗಳಲ್ಲೆ ಗಂಡನನ್ನು ಬಿಟ್ಟು ತನ್ನೂರಿಗೆ ತೆರಳಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಬಿದರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬಿದರಿ ಗ್ರಾಮದ ರೈತ ಸೋಮಶೇಖರ್ ಗುಲಗಾಲಜಂಬಗಿ ಎನ್ನುವ ಯುವಕ ಈ ನಕಲಿ ಮದುವೆಗೆ ಸಿಕ್ಕು ದುಡ್ಡು ಹಾಗೂ ಮಡದಿಯನ್ನು ಕಳೆದುಕೊಂಡಿರುವ ನತದೃಷ್ಟ ವ್ಯಕ್ತಿ. ತನ್ನನ್ನು ಯಾಮಾರಿಸಲೆಂದು ಮ್ಯಾರೇಜ್ ಬ್ರೋಕರ್ ಮತ್ತು ತಂಡ ಸೇರಿಕೊಂಡು ಮಾಡಿರುವ ಕುಕೃತ್ಯವೆಂದು ತಿಳಿದು ಇದೀಗ ನ್ಯಾಯ ಕೋರಿಕೊಂಡು ಮುಧೋಳ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ. ತನಗೆ ವಂಚಿಸಿದ ೭ ಜನರ ವಿರುದ್ಧ ದೂರು ನೀಡಿದ್ದಾನೆ.

ಬಿದರಿ ಗ್ರಾಮದ ಯುವ ರೈತ ಸೋಮಶೇಖರ ಗುಲಗಾಲಜಂಬಗಿ ತಂದೆ-ತಾಯಿಗೆ ಒಬ್ಬನೆ ಗಂಡು ಮಗ. ಮದುವೆ ಆಗಲು ಕನ್ಯಾ ಹುಡುಕುತ್ತಿದ್ದರೂ ವರ್ಷಗಳೇ ಕಳೆದರೂ ಕನ್ಯಾ ಸಿಗಲಿಲ್ಲ. ಇದರಿಂದ ಆತನ ಚಿಕ್ಕಪ್ಪ ಬೆಳಗಾವಿ ಜಿಲ್ಲೆಯ ಕುನ್ನಾಳ ಗ್ರಾಮದಲ್ಲಿ ಇದ್ದು, ಅದೇ ಗ್ರಾಮದ ಸತ್ಯಪ್ಪ ಶಿರೂರ ಎನ್ನುವ ವ್ಯಕ್ತಿಗೆ ಕನ್ಯಾ ಇದ್ದರೆ ನೋಡಿ ಎಂದು ತಿಳಿಸಿದ್ದ.

ಸತ್ಯಪ್ಪ , ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡಿಸುವ ಭರವಸೆ ನೀಡಿದ್ದ. ಬಳಿಕ ಆತ ತನ್ನ ಇತರೆ ಸಹಚರ ಐದು ಜನರು ಸೇರಿಕೊಂಡು ಶಿವಮೊಗ್ಗ ಮೂಲದ ಮಂಜುಳಾ ಎನ್ನುವ ಹುಡುಗಿ ಪೋಟೋ ತೋರಿಸಿ, ಮದುವೆಯಾಗಲು ಈ ಹುಡುಗಿ ತಯಾರಿದ್ದಾಳೆಂದು, ಇದಕ್ಕೆ ೪.೨೫ ಲಕ್ಷ ರೂ. ಹಣ ಕೊಡುಬೇಕೆಂದು ಹೇಳಿದ್ದಾರೆ. ಇದಕ್ಕೆ ಒಪ್ಪಿದ ಸೋಮಶೇಖರ ಕುಟುಂಬ ೪.೦೫ ಲಕ್ಷ ರೂ. ಕೊಟ್ಟಿದ್ದಾರೆ.

೧೦.೧೧.೨೦೨೩ರಂದು ಮುಧೋಳ ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ. ಮದುವೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ಮಂಜುಳಾ ವಿನಾಕಾರಣ ಕಿರಿಕಿರಿ ಉಂಟು ಮಾಡತೊಡಗಿದ್ದು, ಕೊನೆಗೆ ಒಂದು ಮನೆ ತೊರೆದಿದ್ದಾಳೆ. ಪತ್ನಿಯನ್ನು ಕರೆದುಕೊಂಡು ಬರಲೆಂದು ಶಿವಮೊಗ್ಗಕ್ಕೆ ಹೋಗಿದ್ದಾಗ ಆಕೆಗೆ ಅದಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆ ಎನ್ನುವುದು ತಿಳಿದು ತಾನು ಮೋಸ ಹೋಗಿದ್ದು ಗೊತ್ತಾಗಿದೆ.

ಇದೀಗ ಮುಧೋಳ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ಇಲ್ಲೆಯ ಸತ್ಯಪ್ಪ ಶಿರೂರ, ಬಾಗಲಕೋಟೆ ಜಿಲ್ಲೆಯ ಸಂಜು ಮಾಳಿ, ರವಿ ಅರಭಾವಿ, ಹುಬ್ಬಳ್ಳಿಯ ಲಕ್ಷಿ÷್ಮÃ ಗೋಲಭಾವಿ, ನಾಗವ್ವ(ದೊಡ್ಡಲಕ್ಷಿ÷್ಮÃ) ಆಚಾರಿ, ಸಿದ್ದಪ್ಪ ಮುರಟಿ ಹಾಗೂ ಮಂಜುಳಾ ಅವರ ವಿರುದ್ಧ ದೂರು ದಾಖಲಿಸಿದ್ದಾನೆ.