ಜಿಲ್ಲೆ

ನಕಲಿ ಪಾಸ್ ಪೋರ್ಟ್ ತಯಾರಿಸುತ್ತಿದ್ದವರ ಬಂಧನ

ಶಿರಸಿ: ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿ ಪಾಸ್​ಪೋರ್ಟ್ ಪಡೆದಿದ್ದ ವ್ಯಕ್ತಿಯ ಜತೆ ನಕಲಿ ಪಾಸ್ ಪೋರ್ಟ್ ಮಾಡಿಕೊಟ್ಟ ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೋಲಿಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ.

ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿದ್ದ ತಾಲೂಕಿನ ಹುಲೇಕಲ್ ಗ್ರಾಮದ ಹಂಚರ್ಟಾ ಮುಸ್ಲಿಂ ಗಲ್ಲಿಯ ನಿವಾಸಿ ಅಬ್ದುಲ್ ರೆಹಮಾನ್ ಅಬ್ದುಲ್ ಗಫಾರ್ ಸಾಬ್(22) ಹಾಗೂ ನಕಲಿ ಪಾಸ್ ಪೋರ್ಟ್ ತಯಾರಿಸಿದ್ದ ಹುಬ್ಬಳ್ಳಿಯ ಶ್ವೇತಾ ಅಲಿಯಾಸ್ ಲಕ್ಷ್ಮೀ ಹಾಗೂ ಕಲಬುರಗಿಯ ನಿಯಾಜ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ ಪಾಸ್​ಪೋರ್ಟ್ ಮಾಡಲು ಬಳಸುತ್ತಿದ್ದ ಲ್ಯಾಪ್​ಟಾಪ್, ಎರಡು ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಬ್ದುಲ್ ರೆಹಮಾನ್ ಅಬ್ದುಲ್ ಗಫಾರ್ ಸಾಬ್ ಈ ಮೊದಲು ಪಾಸ್​ಪೋರ್ಟ್ ಪಡೆದಿದ್ದರೂ ಆತ ಎಸ್​ಎಸ್​ಎಲ್​ಸಿ ಪಾಸಾಗದಿದ್ದ ಕಾರಣದಿಂದಾಗಿ ಆತನಿಗೆ ಇಸಿಎನ್​ಆರ್ (ಇಮಿಗ್ರೇಶನ್ ಚೆಕ್ ನಾಟ್ ರಿಕ್ವಾಯರ್ಡ್) ದೊರೆತಿರಲಿಲ್ಲ. ಈ ಕಾರಣದಿಂದಾಗಿ ಆತ ಪಾಸ್ ಪೋರ್ಟ್ ಪಡೆಯಲು ಆರೋಪಿಗಳಾದ ಶ್ವೇತಾ ಮತ್ತು ನಿಯಾಜ್ ಅಹ್ಮದ್ ಅವರಿಂದ ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ಪಡೆದು ಅರ್ಜಿ ಹಾಕಿದ್ದ. ವಿಚಾರಣೆ ನಡೆಸಿದ ತೆರಿಗೆ ಅಧಿಕಾರಿಗಳು ನಕಲಿ ಆದಾಯ ತೆರಿಗೆ ಪ್ರಮಾಣ ಪಡೆದಿರುವ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಪೋಲಿಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಡಿವೈಎಸ್ಪಿ ಜಿ.ಟಿ.ನಾಯಕ ಮಾರ್ಗದರ್ಶನ ಹಾಗೂ ಸಿಪಿಐ ಪ್ರದೀಪ ಬಿ.ಯು. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್​ಐ ನಂಜಾ ನಾಯ್ಕ ಹಾಗೂ ಪ್ರಭಾರ ಪಿಎಸ್​ಐ ನಾಗೇಂದ್ರ ನಾಯ್ಕ ಪಾಲ್ಗೊಂಡಿದ್ದರು.