ಜಿಲ್ಲೆ

ನಕಲಿ ಪತ್ರಕರ್ತರ ವಿರುದ್ಧ ಕ್ರಮ

ಬೀದರ್: ಅನಧಿಕೃತವಾಗಿ ನ್ಯೂಸ್ ಚಾನೆಲ್ ಮತ್ತು ವರದಿಗಾರ ಹುದ್ದೆ ಹೆಸರು ಬಳಸಿಕೊಳ್ಳುವವರು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರಾಮಚಂದ್ರನ್ ಎಚ್ಚರಿಕೆ ನೀಡಿದ್ದಾರೆ.

ನಗರ ಸೇರಿ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಸಮಾಜದ ಸ್ವಾಸ್ಥೃ ಹಾಳು ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಬೀದರ್ ಇಲೆಕ್ಟ್ರಾನಿಕ್ ಮೀಡಿಯಾ ಸಂಘದ ಪದಾಧಿಕಾರಿಗಳು ದೂರು ಸಲ್ಲಿಸಿದ್ದಾರೆ. ಇದನ್ನು ಜಿಲ್ಲಾಡಳಿತ ಗಂಭೀರ ಪರಿಗಣಿಸಿದ್ದು, ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಕಲಿ ನ್ಯೂಸ್ ಚಾನೆಲ್‌ಗಳು ಮತ್ತು ಪತ್ರಕರ್ತರ ಹಾವಳಿಯಿಂದ ವೃತ್ತಿಪರ ಪತ್ರಕರ್ತರಿಗೆ ಇರಿಸು ಮುರಿಸು ಉಂಟಾಗುತ್ತಿದೆ. ನಕಲಿ ಲೋಗೋದೊಂದಿಗೆ ಜನಪ್ರತಿನಿಧಿಗಳ ಮುಂದೆ ಹೋಗಿ ಅಸಮಂಜಸ ಪ್ರಶ್ನೆಗಳನ್ನು ಕೇಳುತ್ತಾರೆ. ನಕಲಿ ನ್ಯೂಸ್ ಚಾನೆಲ್ ಜತೆಯಲ್ಲಿ ಅದಕ್ಕೊಂದು ಲೋಗೋ ಮಾಡುತ್ತಿದ್ದಾರೆ. ಒಂದೆರಡು ವಿಡಿಯೋ ಕ್ಲಿಪ್ ಗಳನ್ನು ತಮ್ಮ ಸ್ವಾರ್ಥಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಕೆಲವರಿಂದಾಗಿ ಅಧಿಕೃತ ಸುದ್ದಿ ಸಂಸ್ಥೆಗಳ ಧ್ಯೇಯ ಮತ್ತು ಉದ್ದೇಶ ನೆಲ ಕಚ್ಚುತ್ತಿದೆ. ಈ ಬಗ್ಗೆ ಪರಿಶೀಲಿಸಿ ಇಂಥವರ್ಯಾರೇ ಇದ್ದರೂ ಕ್ರಮ ಕೈಗೊಳ್ಳುವಂತೆ ಸಂಘ ಕೋರಿತ್ತು.

ದೂರಿನ ಹಿನ್ನೆಲೆಯಲ್ಲಿ ಪತ್ರಕರ್ತರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾರಾದರೂ ಅನಧಿಕೃತವಾಗಿ ನ್ಯೂಸ್ ಚಾನೆಲ್ ಹಾಗೂ ವರದಿಗಾರರ ಹುದ್ದೆ ಹೆಸರು ಬಳಸಿ ಗೊಂದಲ ಹುಟ್ಟಿಸುವುದು ಕಂಡುಬಂದರೆ ಕ್ರಮ ಅನಿವಾರ್ಯ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.