ನೆಲಮಂಗಲ: ವಸತಿಹೀನ ಬಡವರಿಗೆ ಸರ್ಕಾರಿ ಜಮೀನು ಕಾಯ್ದಿರಿಸಬೇಕು ಹಾಗೂ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸುತ್ತಿರುವ ಅಧಿಕಾರಿಗಳು ಹಾಗೂ ಭೂಗಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನ ಸಂಘಟನೆ ಪದಾಧಿಕಾರಿಗಳು ಸೋಮವಾರ ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಶಿಕ್ಷಣಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಕಾರ್ಯಕರ್ತರು ನಗರದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಭ್ರಷ್ಟ ಅಧಿಕಾರಿಗಳು ಹಾಗೂ ಭೂಗಳ್ಳರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆಯೂಬ್‌ಖಾನ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದ್ದರೂ ಇಂದಿಗೂ ಬಡವರಿಗೆ, ನೊಂದವರಿಗೆ ನ್ಯಾಯ ದೊರಕದಿರುವುದು ಬೇಸರದ ಸಂಗತಿ ಎಂದರು.
ಬಡವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡರೆ ಅಧಿಕಾರಿಗಳು ತೆರವು ಮಾಡುತ್ತಾರೆ. ಆದರೆ ಉಳ್ಳವರು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಅಕ್ರಮಕ್ಕೆ ಕೆಲವು ಅಧಿಕಾರಿಗಳೇ ಕೈಜೋಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಸಾಕಷ್ಟು ಮಂದಿ ವಸತಿಹೀನ ಕುಟುಂಬಗಳು ವಾಸಮಾಡುತ್ತಿವೆ. ಅಂತಹವರಿಗೆ ಸರ್ಕಾರಿ ಜಾಗದಲ್ಲಿ ಜಾಗ ಕಾಯ್ದಿರಿಸಬೇಕು. ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಒತ್ತುವರಿ ಮಾಡಿಕೊಂಡ ಜಾಗವನ್ನು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಟಿ.ಕೆ.ವಾಸುಮೂರ್ತಿ ಮಾತನಾಡಿ, ಬಡವರು, ನೊಂದವರ ಪರವಾಗಿ ಪ್ರತಿಯೊಬ್ಬ ಅಧಿಕಾರಿ ಕರ್ತವ್ಯ ನಿರ್ವಹಿಸಬೇಕು. ಆದರೆ ಕೆಲ ಅಧಿಕಾರಿ ಭೂಗಳ್ಳರಿಗೆ, ಉಳ್ಳವರ ಪರವಾಗಿದ್ದಾರೆ. ಸರ್ಕಾರಿ ಜಾಗ ರಕ್ಷಿಸಬೇಕಾದ ಅಧಿಕಾರಿಗಳೇ ನಕಲಿ ದಾಖಲೆ ಮಾಡಿಕೊಡುತ್ತಿರುವುದು ಅಕ್ಷಮ್ಯ ಎಂದರು.
ಮಣ್ಣೆ ಗ್ರಾಪಂನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಶೇಷ ತಹಸೀಲ್ದಾರ್ ಪ್ರಕಾಶ್ ಭರವಸೆ ನೀಡಿದರು. ಮುಖಂಡರಾದ ಬ್ಯಾಟರಾಯನಪುರ ವಸೀಂಖಾನ್, ಅಕ್ರಂಖಾನ್, ರಸೂಲ್ ಮತ್ತಿತರರು ಉಪಸ್ಥಿತರಿದ್ದರು.