ಬಾಗಲಕೋಟೆ: ಪೊಲೀಸರಿಗೆ ಯಾಮಾರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ನಕಲಿ ಡಿಸಿಪಿ ಒಬ್ಬರ ಬಣ್ಣ ಬಯಲು ಮಾಡಿರುವ ಖಾಕಿ ಪಡೆ ಆತನ ವಿರುದ್ಧ ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅಂಗವಿಕಲ ಎನ್ನುವ ಕಾರಣಕ್ಕೆ ಬಂಧಿಸಿದೇ ನೋಟಿಸ್ ಕೊಟ್ಟು ಕಳುಹಿಸಿದ್ದಾರೆ.
ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಅಪ್ಪು ಹಿರೇಮಠ ಎನ್ನುವ ಯುವಕ, ತಾನು ಎಪಿಸಿ ಇಲ್ಲವೇ ಡಿಸಿಪಿ ಇದ್ದೇನೆ ಎಂದು ಬೀಟ್ ಪೊಲೀಸರು, ಇನ್ಸಪೆಕ್ಟರ್ ಗಳಿಗೆ ಫೋನ್ ಮಾಡಿ, ಅವರಿಗೆ ಬೆದರಿಕೆ ಹಾಕುತ್ತಿದ್ದ. ಜೊತೆಗೆ ಫೋನ್ ಪೆ ಮಾಡಿ ಎಂದು ಹಣಕ್ಕೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳ ಸಿರೀಸ್ ಮೊಬೈಲ್ ನಂಬರ್ ನಿಂದ ಕರೆ ಮಾಡುತ್ತಿದ್ದ ಆರೋಪಿ ಅಪ್ಪು, ನೀವು ಸರಿಯಾಗಿ ಕರ್ತವ್ಯ ಸರಿಯಾಗಿ ಮಾಡುತ್ತಿಲ್ಲ. ನಿಮ್ಮ ವ್ಯಾಪ್ತಿಯಲ್ಲಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಅವುಗಳನ್ನು ನಿಯಂತ್ರಣ ಮಾಡುತ್ತಿಲ್ಲ. ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ, ಬಳಿಕ ದುಡ್ಡಿಗೆ ಬೇಡಿಕೆ ಇಡುತ್ತಿದ್ದನಂತೆ.
ಬನಹಟ್ಟಿ ಠಾಣೆಯ ಕೆಲ ಬೀಟ್ ಪೊಲೀಸರಿಗೆ ಹೀಗೆಯೇ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ೯೪೮೦೮೦೨೯೯೭ ನಂಬರ್ ನಿಂದ ಕರೆ ಮಾಡಿದ್ದ. ಇದೀಗ ನಕಲಿ ಡಿಸಿಪಿ ಪೊಲೀಸ್ ಬಲೆಗೆ ಸಿಕ್ಕು ಬಿದ್ದಿದ್ದು, ಆತನ ವಿರುದ್ಧ ಎಫೈಆರ್ ದಾಖಲಿಸಿದ್ದಾರೆ. ಅಂಗವಿಕಲ ಇರುವುದರಿಂದ ಬಂಧನ ಮಾಡದೇ ಎಚ್ಚರಿಕೆ ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ಖಚಿತ ಪಡಿಸಿದ್ದಾರೆ.
ಆರೋಪಿ ಅಪ್ಪು ಹಿರೇಮಠ ಈ ಹಿಂದೆ ಬೆಳಗಾವಿ, ಶಿವಮೊಗ್ಗ, ಜಮಖಂಡಿಯಲ್ಲೂ ಇದೇ ಮಾದರಿಯಲ್ಲಿ ಕೃತ್ಯ ನಡೆಸಿದ್ದರಿಂದ ಅಲ್ಲಿಯೂ ಈತನ ವಿರುದ್ಧ ಪ್ರಕರಣ ದಾಖಲಾಗಿವೆ.