ಚಾಮರಾಜನಗರ : ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಜುವೆಲ್ಸ್ ಅಂಗಡಿಯಲ್ಲಿ ಚಾಲಾಕಿ ಮಹಿಳೆಯರಿಬ್ಬರು ನಕಲಿ ಚಿನ್ನ ನೀಡಿ 3.95 ಲಕ್ಷ ರೂ. ಮೌಲ್ಯದ ಅಸಲಿ ಚಿನ್ನಾಭರಣ ಖರೀದಿ ಮಾಡಿ ಪರಾರಿಯಾಗಿದ್ದಾರೆ.
ಸೆ.19 ರಂದು ಇಬ್ಬರು ಅಪರಿಚಿತ ಮಹಿಳೆಯರು ವೈವಿಧ್ಯಮಯ ಚಿನ್ನದ ಅಂಗಡಿಗೆ ಭೇಟಿ ನೀಡಿದ್ದರು. ತಮ್ಮಲ್ಲಿದ್ದ ಚಿನ್ನದ ಆಭರಣವನ್ನು ತೂಕ ಮಾಡಿಸಿದರು. ಅದು 82.480 ಗ್ರಾಂ ಇತ್ತು. ಬಳಿಕ ಯಂತ್ರದಲ್ಲಿ ಪರಿಶೀಲಿಸಿದಾಗ ಆ ಸಮಯದಲ್ಲಿ ಅವು ಅಸಲಿ ಚಿನ್ನಾಭರಣಗಳೇ ಆಗಿದ್ದವು.
ಹೆಂಗಸರು ತಮ್ಮ ಒಡವೆಯನ್ನು ಹಿಂದಕ್ಕೆ ಪಡೆದು ಅಂಗಡಿಯಲ್ಲಿರುವ ಹೊಸ ಒಡವೆ ನೀಡಿ ಎಂದು ವ್ಯಾಪಾರ ಮಾಡಲು ಮುಂದಾದರು. ಈ ನಡುವೆ ಒಬ್ಬ ಮಹಿಳೆ ನಮ್ಮ ಮನೆಯವರು ಅಂಗಡಿ ಮುಂದೆ ಇದ್ದಾರೆ, ಮಾತನಾಡಿಸಿ ಬರುತ್ತೇನೆ ಎಂದು ಹೇಳಿ ಆ ಚಿನ್ನದ ಜತೆ ಹೊರಗೆ ಹೋಗಿ ಮತ್ತೆ ಅಂಗಡಿಗೆ ಬಂದು ಒಡವೆ ನೀಡಿದ್ದಾಳೆ.
ಅಂಗಡಿಯವರು ಮೊದಲೇ ಒಡವೆ ಪರಿಶೀಲನೆ ಮಾಡಲಾಗಿದೆ ಎಂದು ತಿಳಿದು, ಅದರ ಬದಲಾಗಿ 71,605 ಗ್ರಾಂ ಚಿನ್ನ ತೂಕದ ಚಿನ್ನಾಭರಣವನ್ನು ನೀಡಿದ್ದಾರೆ. ಬಳಿಕ ಅಂಗಡಿಯವರು ಮತ್ತೊಮ್ಮೆ ಆ ಆಭರಣವನ್ನು ಪರಿಶೀಲಿಸಿದಾಗ ನಕಲಿ ಚಿನ್ನ ಎಂದು ತಿಳಿದು ಬಂತು. ಪೊಲೀಸರಿಗೆ ತಡವಾಗಿ ದೂರು ನೀಡಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.