ಕಲಘಟಗಿ: ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದಲ್ಲಿ ಸಾವಯವ ಗೊಬ್ಬರದ ಹೆಸರಿನಲ್ಲಿ ನಕಲಿ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡುತ್ತಿರುವ ವಂಚಕರ ಮೇಲೆ ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರು ದಾಳಿ ನಡೆಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮದಲ್ಲಿ ರೈತರಿಗೆ ನಕಲಿ ಗೊಬ್ಬರ ಮಾರಲಾಗುತ್ತದೆ ಎಂದು ರೈತರೊಬ್ಬರ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್. ಕಟ್ಟೇಗೌಡರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಆರೋಪಿತರನ್ನು ಮಾಲು ಸಹಿತ ವಾಹನವನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ ನವನಗರದಲ್ಲಿರುವ ಶಿವನಂದಿ ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಪ್ರೖೆವೇಟ್ ಲಿಮಿಟೆಡ್ನ ಮಾರಾಟ ಸಹಾಯಕರಾದ ಕಲ್ಲಪ್ಪ ಪಾರಿಸ್ ರಪಾಟಿ ಹಾಗೂ ಬಸಪ್ಪ ಗಣಪತಿ ಸೋನಪ್ಪನವರ ಎಂಬುವವರು ಮಿನಿ ಟ್ರಕ್ ವಾಹನದಲ್ಲಿ 50 ಕೆ.ಜಿ. ಚೀಲಕ್ಕೆ 700 ರೂಪಾಯಿ ಪಡೆದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ 56 ಚೀಲಗಳನ್ನು ಮಿನಿಟ್ರಕ್ ಸಹಿತ ವಶಕ್ಕೆ ಪಡೆಯಲಾಗಿದೆ. ಕಂಪನಿಯವರೇ ಚೀಲದ ಮೇಲೆ ಮುದ್ರಿಸಿದಂತೆ ಈ ಗೊಬ್ಬರವು ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಹೊಂದಿರುವುದಿಲ್ಲ. ಬದಲಿಗೆ ಮಣ್ಣು ಸುಧಾರಕ ಅಂಶಗಳಾದ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಹಾಗೂ ಗಂಧಕದ ಅಂಶಗಳನ್ನು ಹೊಂದಿರುತ್ತದೆ. ವಶಕ್ಕೆ ಪಡೆದ ಗೊಬ್ಬರದ ಮಾದರಿ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ರಸಗೊಬ್ಬರ ನಿಯಂತ್ರಣ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಟ್ಟೇಗೌಡರ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಇಲಾಖೆಯ ಜಾಗೃತಿ ದಳದ ಸಹಾಯಕ ಕೃಷಿ ನಿರ್ದೇಶಕರಾದ ಆರ್.ವಿ. ಬಮ್ಮಿಗಟ್ಟಿ, ವಿ.ವಿ. ವಿಠ್ಠಲರಾವ್, ಇತರರು ಪಾಲ್ಗೊಂಡಿದ್ದರು.