ಜಿಲ್ಲೆ

ನಕಲಿ ಐಪಿಎಸ್ ಅಧಿಕಾರಿಯಿಂದ 10 ಲಕ್ಷ ರೂ.ವಂಚನೆ

ಕೊಳ್ಳೇಗಾಲ: ಪಟ್ಟಣದ ವ್ಯಕ್ತಿಯೊಬ್ಬನಿಗೆ ದೂರವಾಣಿಯಲ್ಲಿ ಆರ್‌ಬಿಐನಲ್ಲಿ ಐಪಿಎಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ಬೆದರಿಕೆಯೊಡ್ಡುವ ಮೂಲಕ 10 ಲಕ್ಷ ರೂ. ವಸೂಲಿ ಮಾಡಿದ್ದು, ಈ ಸಂಬಂಧ ಶನಿವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ನಾಯ್ಡು ತೋಟಕ್ಕೆ ಹೊಂದಿಕೊಂಡಿತಿರುವ ಬಸೀಪುರ ಮುಖ್ಯ ರಸ್ತೆ ನಿವಾಸಿ ಅನಂತಪದ್ಮ ನಾಭ ಶೆಟ್ಟಿ 10 ಲಕ್ಷ ರೂ. ಕಳೆದುಕೊಂಡವರು. ಜು.5 ರಂದು ಅನಂತಪದ್ಮನಾಭ ಶೆಟ್ಟಿ ಅವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಾನು ಆರ್‌ಬಿಐನಲ್ಲಿ ಐಪಿಎಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನೀನು ಮಾನವ ಕಳ್ಳಸಾಗಣೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿರುವ ವಿಷಯ ನಮಗೆ ಗೊತ್ತಾಗಿದೆ ಎಂದು ಬೆದರಿಸಿದ್ದಾನಲ್ಲದೆ, ಕೂಡಲೇ 25 ಲಕ್ಷ ರೂ. ಗಳನ್ನು ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮಾಡುವಂತೆ ತಿಳಿಸಿದ್ದಾನೆ. ಇದು ಸಾಧ್ಯವಾಗದಿದ್ದಲ್ಲಿ ನಿಮ್ಮ ಕುಟುಂಬದ ಎಲ್ಲರನ್ನೂ ಬಂಧಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿಗೊಂಡ ಅನಂತಪದ್ಮನಾಭಶೆಟ್ಟಿ ಅವರು ತಕ್ಷಣವೇ ಆರ್‌ಟಿಜಿಎಸ್ ಮೂಲಕ 10 ಲಕ್ಷ ರೂ. ಹಣವನ್ನು ಅಪರಿಚಿತ ವ್ಯಕ್ತಿ ತಿಳಿಸಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇದಾದ ನಂತರ ಉಳಿದ 15 ಲಕ್ಷ ರೂ. ಹಣವನ್ನು ಕೊಡುವುದರ ಬಗ್ಗೆಯೂ ಅಪರಿಚಿತ ವ್ಯಕ್ತಿ ಮಾತನಾಡುತ್ತಿದ್ದ ವಿಚಾರ ಅನಂತ ಪದ್ಮನಾಭಶೆಟ್ಟಿ ಅವರ ಪುತ್ರನಿಗೆ ತಿಳಿದಿದ್ದು, ಹಣ ಕೊಡುವುದನ್ನು ತಡೆದಿದ್ದಾನೆ. ನಂತರ ಈ ವಿಷಯವನ್ನು ಪೊಲೀಸರ ಗಮನಕ್ಕೆ ತರುವುದೇ ಸರಿ ಎಂಬ ನಿರ್ಧಾರ ಮಾಡಿ ಅನಂತ ಪದ್ಮ ನಾಭಶೆಟ್ಟಿ ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.