ಜಿಲ್ಲೆ

ನಕಲಿ ಅನಸ್ತೇಶಿಯಾ ವೈದ್ಯರಿಗೆ 15 ಲಕ್ಷ ರೂ. ದಂಡ

ಮೈಸೂರು: ಅನಸ್ತೇಶಿಯಾ ಸ್ಪೆಷಲಿಸ್ಟ್ ವೈದ್ಯ ಅಲ್ಲದಿದ್ದರೂ ಅನಸ್ತೇಶಿಯಾ ನೀಡಿದ್ದ ಹಿನ್ನೆಲೆಯಲ್ಲಿ ಮೃತಪಟ್ಟ ರೋಗಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುವಂತೆ ನಗರದ ವೈದ್ಯ ಡಾ.ಚಂದ್ರಶೇಖರ್ ಸೇರಿದಂತೆ ಇನ್ನಿತರ ವೈದ್ಯರಿಗೆ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.
ಗೋಕುಲಂನಲ್ಲಿರುವ ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್, ಡಾ.ಟಿ.ಎಸ್.ವಾಸನ್, ಡಾ.ಪಿ.ಹರಿದಾಸ್ ಉಪಾಧ್ಯ, ಡಾ.ಎಚ್.ಎಸ್.ರವಿ ಸೇರಿದಂತೆ ಇತರರು ಪರಿಹಾರ ನೀಡಬೇಕು ಎಂದು ವೇದಿಕೆ ಅಧ್ಯಕ್ಷರಾದ ನ್ಯಾಯಾಧೀಶರಾದ ಎ.ಕೆ.ನವೀನಕುಮಾರಿ, ಸದಸ್ಯರಾದ ಎಂ.ಕೆ.ಲಲಿತಾ, ಮಾರುತಿ ವಡ್ಡರ್ ಅವರಿದ್ದ ಪೀಠ ಆಗಸ್ಟ್ 7ರಂದು ಆದೇಶಿಸಿದೆ.
ನಗರದ ಯಾದವಗಿರಿ ನಿವಾಸಿ ಬಿ.ಶಿವಣ್ಣ ಅವರನ್ನು 2017ರಲ್ಲಿ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, 2017ರ ಜುಲೈ 26 ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಬಿ.ಶಿವಣ್ಣ ಅವರ ತಮ್ಮನ ಮಗ ಕೆ.ರವಿ ಅವರು ಶಿವಣ್ಣ ಅವರ ಪುತ್ರಿ ಸುಧಾ ಪರವಾಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷೃದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಡಾ. ಚಂದ್ರಶೇಖರ್ ಅವರು ಅನಸ್ತೇಶಿಯ ಸ್ಪೆಷಲಿಸ್ಟ್ ಅಲ್ಲದಿದ್ದರೂ ಸುಮಾರು 40 ವರ್ಷದಿಂದಲೂ ಅನಸ್ತೇಶಿಯ ಸ್ಪೆಷಲಿಸ್ಟ್ ಎಂದು ಹೇಳಿ ಚಿಕಿತ್ಸೆ ನೀಡಿರುವುದು ವಿಚಾರಣೆ ವೇಳೆ ಬಹಿರಂಗವಾಗಿತ್ತು. ಈ ಸಂಬಂಧ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿ ಎಲ್ಲ ದಾಖಲೆಗಳನ್ನು ಒದಗಿಸಿ ಸ್ವತಃ ರವಿ ಅವರೇ ವಾದ ಮಂಡಿಸಿದ್ದರು.
ವಾದ ಆಲಿಸಿದ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಮೃತ ಬಿ.ಶಿವಪ್ಪ ಅವರ ಕುಟುಂಬಕ್ಕೆ ಡಾ. ಚಂದ್ರಶೇಖರ್ ಮತ್ತು ಡಾ.ಟಿಎಸ್ ವಾಸನ್ 5 ಲಕ್ಷ ರೂ., ಡಾ.ಹರಿದಾಸ್ ಉಪಾಧ್ಯ 1.50 ಲಕ್ಷ ರೂ., ಡಾ. ರವಿ 2 ಲಕ್ಷ ರೂ. ಸೇರಿ 15 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.