ನಂಜನಗೂಡು ತಾಲೂಕಿನ ಸುತ್ತೂರು ಮಠದಲ್ಲಿ ನಡೆದ ಶಿಕ್ಷಕರ ಕಾರ್ಯಾಗಾರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಾರಾಯಣಮೂರ್ತಿ, ಶ್ರೀನಿವಾಸ ಕುಲಕರ್ಣಿ ಇದ್ದರು. 
ಜಿಲ್ಲೆ

ನಂಬಿಕೆಯ ಜಗತ್ತು ಸೃಷ್ಟಿಸಿ ಸುಂದರ ಬದುಕು ರೂಪಿಸಿ

ನಂಜನಗೂಡು: ಅನಗತ್ಯ ತರ್ಕ ಮಾಡದೆ ನಂಬಿಕೆಯ ಜಗತ್ತು ಸೃಷ್ಟಿ ಮಾಡುವ ಮೂಲಕ ಸುಂದರ ಬದುಕನ್ನು ರೂಪಿಸಿ ಎಂದು ಶಿಕ್ಷಕರಿಗೆ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಸಲಹೆ ನೀಡಿದರು.

ತಾಲೂಕಿನ ಸುತ್ತೂರು ಮಠಕ್ಕೆ ಬುಧವಾರ ಭೇಟಿ ನೀಡಿ ವಿಶ್ವ ಹಿಂದು ಪರಿಷತ್ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜೆಎಸ್‌ಎಸ್ ಸಂಸ್ಥೆಗಳ ಕನ್ನಡ ಮತ್ತು ಆಂಗ್ಲ ಭಾಷಾ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

ಗುರುವಿನ ಆಶೀರ್ವಾದದಿಂದ ಧೈರ್ಯ, ವಿಶ್ವಾಸ ಮತ್ತು ಶಾಂತಿಯನ್ನು ಪಡೆಯಬೇಕು. ಶಿಕ್ಷಕರು ಮಕ್ಕಳಿಗೆ ಪ್ರೀತಿ, ವಿಶ್ವಾಸ, ಶ್ರದ್ಧೆಯಿಂದ ಬೋಧನೆ ಮಾಡಿದರೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯೂ ಆಗುತ್ತದೆ ಎಂದರು.

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಜೀವನದಲ್ಲಿ ಏನು ಮಾಡಬೇಕು ಎನ್ನುವುದರ ಬದಲು ಹೇಗೆ ಮಾಡಬೇಕು ಎಂಬುದನ್ನು ಅರಿತಿರಬೇಕು. ದೇಶದ ಪ್ರಗತಿ ಮಾತು, ಶಬ್ದ ಹಾಗೂ ಸಾಹಿತ್ಯದ ಪುಟಗಳಲ್ಲಿ ಇಲ್ಲ. ಅದು ಮಾಡುವ ಕೆಲಸದಲ್ಲಿದೆ. ಶಿಕ್ಷಕರು ಮಾತಿನಲ್ಲಿ ಪ್ರೀತಿ, ಕರುಣೆ, ವಿಶ್ವಾಸ ನಂಬಿಕೆ ಹೊಂದಿದ್ದರೆ ಮಕ್ಕಳಲ್ಲಿ ಕಲಿಕಾ ಮನೋಭಾವ ವೃದ್ಧಿಸುತ್ತದೆ ಎಂದು ಹೇಳಿದರು.

ಕರ್ನಾಟಕವಲ್ಲದೇ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಶ್ರೀಗಳು ಸುತ್ತೂರಿನ ವಸತಿ ಶಾಲೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನೀಡುತ್ತಿರುವುದು ಮಾನವೀಯತೆಯ ಶ್ರೇಷ್ಠ ಕೆಲಸವಾಗಿದೆ ಎಂದರು.

ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು ಮತ್ತು ದೇಶವನ್ನು ಅಭಿವೃದ್ಧಿ ಮಾಡಬೇಕು ಎಂಬ ಬಯಕೆಯನ್ನು ಹೊಂದಿರುವ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಶಿಕ್ಷಕರಿಗೆ ಕಳಶ ಪ್ರಾಯದಂತಿದ್ದಾರೆ. ಶಿಕ್ಷಕರಲ್ಲಿ ಶ್ರದ್ಧೆ, ಧೈರ್ಯ, ನಂಬಿಕೆ ಇದ್ದರೆ ಜಗತ್ತನ್ನೇ ಗೆಲ್ಲುವ ಮಕ್ಕಳನ್ನು ಸೃಷ್ಟಿಸಲು ಸಾಧ್ಯ. ಸಂಸ್ಕೃತಿ ಮತ್ತು ಸಂಸ್ಕಾರ ಶ್ರೇಷ್ಠವಾದದ್ದು, ಅದನ್ನು ಪ್ರತಿಯೊಬ್ಬರೂ ಹೊಂದಿರಬೇಕು. ಉತ್ತಮ ಸಂಸ್ಕಾರದಿಂದ ಜಗತ್ತಿಗೆ ಬೇಕಾದದ್ದನ್ನು ಕೊಡಲು ಸಾಧ್ಯ. ವೃತ್ತಿಯಲ್ಲಿ ಪ್ರಾವೀಣ್ಯತೆ ಮತ್ತು ವಿಶ್ವಾಸದಿಂದ ಕೆಲಸ ಮಾಡಬೇಕು ಎಂದು ಆಶೀರ್ವದಿಸಿದರು.

ಇದಕ್ಕೂ ಮೊದಲು ನಾರಾಯಣಮೂರ್ತಿ, ಸುಧಾಮೂರ್ತಿ ಅವರು ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃ ಗದ್ದುಗೆಗೆ ಸಲ್ಲಿಸಿದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಸುಧಾಮೂರ್ತಿ ಅವರ ಸಹೋದರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಖಗೋಳ ವಿಜ್ಞಾನಿಯಾಗಿರುವ ಶ್ರೀನಿವಾಸ ಕುಲಕರ್ಣಿ, ವಿಶ್ವ ಹಿಂದು ಪರಿಷತ್‌ನ ಕೇಶವಮೂರ್ತಿ, ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಉಪಸ್ಥಿತರಿದ್ದರು.