ತಿ.ನರಸೀಪುರ: ರೈತರ ಸಂಸ್ಥೆಯಾಗಿರುವ ಮೈಮುಲ್‌ನಲ್ಲಿ ಸಿಹಿತಿಂಡಿಗಳ ಮೇಲೆ ದಸರಾ ಹಬ್ಬದವರೆಗೂ ಶೇ.20ರಷ್ಟು ರಿಯಾಯಿತಿ ಇದ್ದು, ಸಾರ್ವಜನಿಕರು ಕಲಬೆರಕೆ ಇಲ್ಲದ ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸಂಸ್ಥೆ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮೈಮುಲ್ ನಿರ್ದೇಶಕ ಓಂಪ್ರಕಾಶ್ ಮನವಿ ಮಾಡಿದರು.
ಮಂಗಳವಾರ ಪಟ್ಟಣದ ವಿಜಯ ಭಗವಾನ್ ಚಿತ್ರಮಂದಿರ ವೃತ್ತದ ಬಳಿ ತೆರೆದಿರುವ ನಂದಿನಿ ಪಾರ್ಲರ್ ಉದ್ಘಾಟಿಸಿ ಮಾತನಾಡಿ, ಮೈಮುಲ್ ಆ.15ರಿಂದ ಸೆಪ್ಟೆಂಬರ್ 20 ರವರೆಗೆ ಸಿಹಿತಿಂಡಿಗಳ ಮೇಲೆ ಶೇ.20ರಷ್ಟು ರಿಯಾಯಿತಿ ನೀಡಿದೆ. ಉತ್ಪನ್ನಗಳ ಮಾರಾಟದಿಂದ ಬಂದ ಲಾಭಾಂಶವನ್ನು ಮೈಮುಲ್ ರೈತರಿಗೆ ನೀಡಲಿದೆ ಎಂದರು.
ಮೈಸೂರು ಜಿಲ್ಲೆಯ ರೈತರಿಗೆ ಸಂಸ್ಥೆ ಪ್ರತಿ ಲೀ.ಹಾಲಿಗೆ 36 ರೂ.ಗಳನ್ನು ನೀಡುತ್ತಿದೆ, ಜಿಲ್ಲೆಯ 7 ತಾಲೂಕುಗಳ ಪೈಕಿ ನಂಜನಗೂಡು ಹೊರತುಪಡಿಸಿದರೆ ತಿ.ನರಸೀಪುರ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ತಾಲೂಕಾಗಿದೆ ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಆರ್.ಚೆಲುವರಾಜು ಮಾತನಾಡಿ, ಜನರು ಗಡಿ ಕಾಯುವ ಸೈನಿಕರಿಗೆ ತೋರುವ ಕಾಳಜಿಯನ್ನು ರೈತರ ಮೇಲೂ ತೋರುತ್ತಿದ್ದಾರೆ. ರೈತರು ಶ್ರಮ ಜೀವಿಗಳಾಗಿದ್ದು, ಮೈಮುಲ್ ರೈತರೇ ಕಷ್ಟಪಟ್ಟು ಬೆಳೆಸಿರುವ ಸಂಸ್ಥೆಯಾಗಿದೆ. ಹಾಗಾಗಿ ಇಲ್ಲಿ ಎಷ್ಟೇ ಲಾಭ ಬಂದರೂ ಅದು ರೈತರಿಗೆ ಸೇರುತ್ತದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಹಾಲು ಮತ್ತು ಹಾಲಿನ ಉತ್ಪನ್ನಗಳು ರಾಜ್ಯದ ಪ್ರತಿ ಹಳ್ಳಿಗಳಲ್ಲೂ ದೊರಕಬೇಕೆಂಬ ಉದ್ದೇಶದೊಂದಿಗೆ ಹೆಚ್ಚು ಪಾರ್ಲರ್‌ಗಳನ್ನು ತೆರೆಯಲಾಗುತ್ತಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಗುಣ ಮಟ್ಟದ ಕಲಬೆರಕೆಮುಕ್ತ ಉತ್ಪನ್ನ ದೊರಕಿಸಿಕೊಡಬೇಕೆಂಬುದು ಸಂಸ್ಥೆಯ ಉದ್ದೇಶ. ಸಾರ್ವಜನಿಕರು ನಂದಿನಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಮನವಿ ಮಾಡಿದರು.
ಮಾರುಕಟ್ಟೆ ವ್ಯವಸ್ಥಾಪಕ ಜಯಶಂಕರ್, ಕ್ಷೇತ್ರಾಧಿಕಾರಿ ಎಚ್.ಎಂ.ಮನೋಜ್, ಪಾರ್ಲರ್ ಮಾಲೀಕ ಮಂಜುನಾಥ್, ಮುಖಂಡರಾದ ಗುರುಮೂರ್ತಿ, ಮಹದೇವಪ್ಪ ಇತರರು ಇದ್ದರು.