ತೀರ್ಥಹಳ್ಳಿ: ನಂದಿತಾ ಪ್ರಕರಣದಲ್ಲಿ ಶಾಸಕರ ವಿರುದ್ಧ ದಾಖಲಾಗಿದ್ದ 5 ಕೇಸ್ಗಳನ್ನು ಸರ್ಕಾರದ ಮೇಲೆ ಒತ್ತಡ ತಂದು ಮೊಕದ್ದಮೆಗಳನ್ನು ಹಿಂಪಡೆಯಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ನಂದಿತಾ ಪ್ರಕರಣದ ಸತ್ಯ ಸಂಗತಿ ಜನತೆಗೆ ತಿಳಿಸಲು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಈ ಬಗ್ಗೆ ಗೋಪಾಲಗೌಡ ರಂಗಮಂದಿರದಲ್ಲಿ ಮುಖಾಮುಖಿ ಚರ್ಚೆಗೂ ನಾನು ಸಿದ್ಧ. ಧೈರ್ಯವಿದ್ದರೆ ಚರ್ಚೆಗೆ ಬರಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರಗೆ ಸವಾಲು ಹಾಕಿದರು.
ಕರೊನಾ ಸಂಕಷ್ಟದ ವೇಳೆ ಶಾಸಕರು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಬಿಜೆಪಿಯವರು ಹೊರತುಪಡಿಸಿ ಬೇರೆಯವರು ಗುತ್ತಿಗೆ ಹಿಡಿದ ಮರಳು ಕ್ವಾರಿಗೆ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ನನ್ನ ವಿರುದ್ಧ ದಾವೆ ಹೂಡುವ ಬೆದರಿಕೆ ಹಾಕುತ್ತಾರೆ. ಶಾಸಕರ ವಿರುದ್ಧ ದಾವೆ ಹೂಡಲು ಇಂತಹ ಹಲವಾರು ದಾಖಲೆಗಳು ನನ್ನ ಬಳಿಯೂ ಇವೆ. ಅಗತ್ಯವಾದರೆ ಪ್ರತಿ 2 ತಿಂಗಳಿಗೊಂದು ದೂರು ದಾಖಲಿಸುತ್ತೇನೆ ಎಂದರು.
ಜೂ.1ರಂದು ಉಪವಾಸ ಸತ್ಯಾಗ್ರಹ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಾರತಮ್ಯ ನೀತಿ ಮತ್ತು ಆಡಳಿತ ವೈಫಲ್ಯ ಖಂಡಿಸಿ ಜೂ.1ರಂದು ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಕಿಮ್ಮನೆ ರತ್ನಾಕರ್ ತಿಳಿಸಿದರು.
ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಬಿಜೆಪಿ ನೇತೃತ್ವದ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಜನತೆಯ ಹಸಿವು, ಆರ್ಥಿಕ ಮುಗ್ಗಟ್ಟು ಹಾಗೂ ಉದ್ಯೋಗದ ಬಗ್ಗೆ ಸ್ಪಂದಿಸುತ್ತಿಲ್ಲ. ಆರ್ಥಿಕ ಚೇತರಿಕೆಯ ಘೊಷಣೆಗಳು ಜನರಿಗೆ ತಲುಪಿಲ್ಲ. ಇಂತಹ ಸಂಕಷ್ಟದಲ್ಲಿ ಶಾಸಕರು ಪ್ರತಿಪಕ್ಷದವರನ್ನು ಹತ್ತಿಕ್ಕುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆಂದು ದೂರಿದರು.
ಪಿಎಂ ಕೇರ್ ಫಂಡ್ ಪಾರದರ್ಶಕತೆ ಕುರಿತು ಪ್ರಶ್ನಿಸಿದ ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ಕೇಸ್ ದಾಖಲಿಸಿರುವುದು ಖಂಡನೀಯ. ಸರ್ಕಾರಿ ಅಧಿಕಾರಿಗಳಿದ್ದ ವೇದಿಕೆಯಲ್ಲಿ ಕೋಮು ಪ್ರಚೋದನೆ ಭಾಷಣ ಮಾಡಿರುವ ಜ್ಞಾನೇಂದ್ರ ವಿರುದ್ಧ ದೂರು ದಾಖಲಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕಾರ್ವಿುಕ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಕಾರ್ವಿುಕರು ಮತ್ತು ಕೃಷಿಕರ ಬದುಕಿಗೆ ಮಾರಕ. ಮಾಜಿ ಸಿಎಂ ಬಂಗಾರಪ್ಪ ಅವಧಿಯಲ್ಲಿ ಜಾರಿಗೆ ಬಂದಿದ್ದ 10 ಎಚ್ಪಿ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಯೋಜನೆ ರದ್ದುಗೊಳಿಸುವ ತೀರ್ಮಾನ ರೈತ ವಿರೋಧಿ ನೀತಿ ಎಂದು ಟೀಕಿಸಿದರು.
ಕೆಸ್ತೂರು ಮಂಜುನಾಥ್, ಜೈಪ್ರಕಾಶ್ ಶೆಟ್ಟಿ, ಡಿ.ಎಸ್.ವಿಶ್ವನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಧನಂಜಯ್, ತಿಮ್ಮಪ್ಪ, ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿದ್ದರು.