ಚಿಕ್ಕಬಳ್ಳಾಪುರ: ನಂದಿಯ ಭೋಗ ನಂದೀಶ್ವರ ಬ್ರಹ್ಮರಥೋತ್ಸವವು ಬುಧವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.
ಆಲಯದ ಆವರಣದಲ್ಲಿ ಬೆಳಗ್ಗೆ 11.40ಕ್ಕೆ ವಿಶೇಷ ಪೂಜೆ ಸಲ್ಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಆರೋಗ್ಯ ಸಚಿವ ಡಾ ಕೆ.ಸುಧಾಕರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಜತೆಯಲ್ಲಿ ದೇವರನಾಮ ಘೋಷಣೆಯೊಂದಿಗೆ ರಥ ಎಳೆದರು. ಪ್ರತಿ ವರ್ಷದಂತೆ ಚಿಕ್ಕ ರಥದಲ್ಲಿ ಅಂಬಿಕಾ ಮತ್ತು ಗಣಪತಿ, ದೊಡ್ಡ ರಥದಲ್ಲಿ ಗಿರಿಜಾಂಬಾ ಸಮೇತ ಶ್ರೀ ಭೋಗನಂದೀಶ್ವರ ಮೂರ್ತಿ ಇರಿಸಲಾಗಿತ್ತು. ಭಕ್ತರು ಹರಕೆ ಹೊತ್ತು ರಥದ ಮೇಲೆ ದವನ ಸಮೇತ ಬಾಳೆಹಣ್ಣು ಎಸೆದರು. ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಮಾಜಿ ಸದಸ್ಯ ಪಿ.ಎನ್.ಕೇಶವರೆಡ್ಡಿ ಮತ್ತಿತರರು ಇದ್ದರು.
ದಣಿವು ನೀಗಿಸಿದ ದಾನಿಗಳು: ಪ್ರತಿ ವರ್ಷದಂತೆ ವಿವಿಧ ಸಂಘ ಸಂಸ್ಥೆ ಮತ್ತು ದಾನಿಗಳು, ಆಲಯ ಸಮಿತಿ ಮತ್ತು ಯುವಕರ ಬಳಗದಿಂದ ಜಾತ್ರೆಗೆ ಬಂದಿದ್ದ ಜನರಿಗೆ ಮಜ್ಜಿಗೆ, ಪಾನಕ, ಹೆಸರು ಬೇಳೆ, ನೀರಿನ ಪಾಕೇಟು ವಿತರಿಸಿ ದಣಿವು ನೀಗಿಸಿದರು. ಉಪವಾಸದಲ್ಲಿದ್ದ ಭಕ್ತರ ಹಸಿವನ್ನು ಅನ್ನ ಸಂತರ್ಪಣೆ ಮೂಲಕ ನೀಗಿಸಿದರು. ಸುಧಾಕರ್ ಫೌಂಡೇಷನ್‌ನಿಂದ ಜಾತ್ರೆಗೆ ಹೋಗಿ ಬರಲು ಜಿಲ್ಲಾ ಕೇಂದ್ರದಿಂದ ಉಚಿತ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಭರ್ಜರಿ ವ್ಯಾಪಾರ: ಸಹಜವಾಗಿ ಜಾತ್ರೆ ಹಿನ್ನೆಲೆಯಲ್ಲಿ ತಲೆ ಎತ್ತಿದ್ದ ಬುರುಗು, ಬತ್ತಾಸು ಸೇರಿ ತಿಂಡಿ ತಿನಿಸು, ಅಲಂಕಾರಿಕ ಮತ್ತು ಆಟಿಕೆ ವಸ್ತುಗಳ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಜಾಯಿಂಟ್ ವ್ಹೀಲ್, ಪುಟಾಣಿ ರೈಲು ಸೇರಿ ಮನರಂಜನಾತ್ಮಕ ನಾನಾ ಆಟಗಳು ಗಮನ ಸೆಳೆದವು. ಮಕ್ಕಳು ಇಷ್ಟವಾದ ವಸ್ತುಗಳನ್ನು ಕೊಡಿಸಲು ಪಟ್ಟು ಹಿಡಿಯುತ್ತಿದ್ದ, ಜನಸಂದಣಿಯಲ್ಲಿ ಹಲವರು ಮನರಂಜನೆಯ ಚಟುವಟಿಕೆಯಲ್ಲಿ ಖುಷಿ ಅನುಭವಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಟ್ರಾಫಿಕ್ ಜಾಮ್‌ಗೆ ತತ್ತರ: ಪೊಲೀಸರ ಬಿಗಿ ಕ್ರಮಗಳ ನಡುವೆಯೂ ನಂದಿ ಮತ್ತು ಮುದ್ದೇನಹಳ್ಳಿ, ನಂದಿ ಮತ್ತು ಕುಪ್ಪಳ್ಳಿ, ನಂದಿ ಮತ್ತು ದೊಡ್ಡಬಳ್ಳಾಪುರ ಮಾರ್ಗದ ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಹರಸಾಹಸ ಮಾಡಿ, ಸಂಚಾರ ದಟ್ಟಣೆ ನಿಯಂತ್ರಿಸಿದರು.
ಭಕ್ತರ ಸಂಖ್ಯೆ ಏರಿಕೆ: ಕರೊನಾ ಸೋಂಕಿನ ನಿರ್ಬಂಧದ ಹಿನ್ನೆಲೆಯಲ್ಲಿ ಕಳೆದ ವರ್ಷ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಆದರೆ, ಈ ಬಾರಿ ವಿವಿಧ ಭಾಗಗಳಿಂದ ಸಾವಿರಾರು ಜನ ಆಗಮಿಸಿದ್ದರು. ಜಾತ್ರೆಗೆ ರಾಜ್ಯ ಮಾತ್ರವಲ್ಲದೆ ಆಂಧ್ರ, ತಮಿಳುನಾಡು ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.
ರಥಗಳ ಬಳಿ ಸುರಕ್ಷತೆ: ಜನರು ರಥದ ಬಳಿಗೆ ಹೋಗಲು ಪೊಲೀಸರು ಬಿಡಲಿಲ್ಲ. ವಿಶೇಷ ಕಾವಲುಪಡೆ ಹದ್ದಿನ ಕಣ್ಣಿಟ್ಟಿತ್ತು. 10 ರಿಂದ 15 ಅಡಿ ದೂರದಲ್ಲಿ ರಥದ ಚೈನು ಎಳೆಯಲು ಭಕ್ತರಿಗೆ ಅವಕಾಶ ನೀಡಲಾಗಿತ್ತು.