ಜಿಲ್ಲೆ

ನಂದಿ ಗಿರಿಧಾಮದಲ್ಲಿ ವ್ಯಾಲಂಟೈನ್ಸ್ ಡೇ: 9 ಸಾವಿರಕ್ಕೂ ಹೆಚ್ಚು ಮಂದಿ ಆಗಮನ ವಿಶೇಷಾಧಿಕಾರಿಗಳ ಕಚೇರಿ ಮಾಹಿತಿ

ಚಿಕ್ಕಬಳ್ಳಾಪುರ: ವ್ಯಾಲಂಟೈನ್ಸ್ ಡೇ ಹಿನ್ನೆಲೆಯಲ್ಲಿ ಸೋಮವಾರ ನಂದಿ ಗಿರಿಧಾಮಕ್ಕೆ ಪ್ರೇಮಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ, ಭಾನುವಾರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ಹಲವು ದಿನಗಳಿಂದ ಪ್ರವಾಸಿ ತಾಣದಿಂದ ದೂರ ಉಳಿದಿದ್ದರು.

ಗಿರಿಧಾಮವು ಪ್ರೇಮಿ, ನೂತನ ದಂಪತಿಗಳಿಗೆ ನೆಚ್ಚಿನ ತಾಣ. ಇಲ್ಲಿನ ಟಿಪ್ಪು ಡ್ರಾಪ್, ಗಾಂಧಿ ನಿಲಯ, ಟಿಪ್ಪು ಅರಮನೆ, ಕಲ್ಯಾಣಿ ಸೇರಿ ಹಲವೆಡೆ ಓಡಾಡುವುದೇ ಮುದ. ಇದರಿಂದ ಇಲ್ಲಿಗೆ ವರ್ಷದ ಮೊದಲ ದಿನ, ಪ್ರೇಮಿಗಳ ದಿನಾಚರಣೆಗೆ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಂತೆ ಸೋಮವಾರ ಸಹ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಸೇರಿ ವಿವಿಧೆಡೆಯಿಂದ ಜನ ಆಗಮಿಸಿದ್ದರು. ಇದರಲ್ಲಿ ಬಹುತೇಕ ಐಟಿ ಬಿಟಿ ನೌಕರರು, ಕಾಲೇಜು ವಿದ್ಯಾರ್ಥಿಗಳು, ಹೊಸದಾಗಿ ಮದುವೆಯಾದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಗಿರಿಧಾಮದ ತಪ್ಪಲಿನ ಪ್ರವೇಶ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಮದ್ಯ ಸಾಗಣೆ ತಡೆಯಲು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಯಿತು. ಅಸಭ್ಯವಾಗಿ ವರ್ತಿಸದಂತೆ ಎಚ್ಚರಿಕೆ ನೀಡಲಾಗಿತ್ತು. ಮಾಸ್ಕ್ ಕಡ್ಡಾಯ ಮತ್ತು ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ ಸೇರಿ ಕರೊನಾ ಮಾರ್ಗಸೂಚಿ ನಿಯಮ ಪಾಲಿಸಲು ಸೂಚಿಸಲಾಯಿತು.

9 ಸಾವಿರ ಮಂದಿ ಭೇಟಿ: ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ 6 ಸಾವಿರ ಮಂದಿ ಭೇಟಿ ನೀಡುತ್ತಾರೆ. ಪ್ರೇಮಿಗಳ ದಿನದಂದು 9 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು ಎಂದು ಗಿರಿಧಾಮದ ವಿಶೇಷಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.

ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ: ಪ್ರತಿ ಬಾರಿಯೂ ಜನಸಂದಣಿಯಿಂದ ಗಿರಿಧಾಮದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆಯು ಆನ್‌ಲೈನ್ ಮತ್ತು ಅಫ್‌ಲೈನ್ ಮೂಲಕ ಪ್ರವೇಶ ಪಾಸ್ ವಿತರಣೆ ವ್ಯವಸ್ಥೆ ಕೈಗೊಂಡಿದ್ದು, ಪಾರ್ಕಿಂಗ್‌ಗೆ ಅಗತ್ಯ ಸ್ಥಳ ಗುರುತಿಸಿದೆ. ಬೆಳಗ್ಗೆ 5 ಗಂಟೆಗೆ ಪ್ರವಾಸಿಗರು ಕಾರು, ಆಟೋ, ದ್ವಿಚಕ್ರ ವಾಹನದಲ್ಲಿ ಆಗಮಿಸಿ ಕಾದು ಕುಳಿತರು. ಆದರೆ, 6ರ ಬಳಿಕ ಬಿಡಲಾಯಿತು.

ಕರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ಹಲವು ತಿಂಗಳು ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಪ್ರವಾಸ ಯೋಜನೆ ರೂಪಿಸಲಾಯಿತು. ಬಹಳ ದಿನಗಳ ನಂತರ ಖುಷಿಯಾಗುತ್ತಿದೆ. ರಜನಿ, ಟೆಕ್ಕಿ, ಬೆಂಗಳೂರು ****** ನಂದಿ ಗಿರಿಧಾಮಕ್ಕೆ ಪ್ರತಿ ವರ್ಷದಂತೆ ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಜನರು ಆಗಮಿಸಿದ್ದರು. ಕರೊನಾ ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯಾಗದಂತೆ ನಿಗಾ ವಹಿಸಲಾಯಿತು. ಗೋಪಾಲ್, ನಂದಿ ಗಿರಿಧಾಮ ವಿಶೇಷಾಧಿಕಾರಿ