ಜಿಲ್ಲೆ

ನಂದಗೋಪಾಲನ ವೇಷ ತೊಟ್ಟ ಪುಟಾಣಿಗಳು

ಯಾದಗಿರಿ: ಅಲ್ಲಿ ಸಾಕ್ಷಾತ್ ಮಥರಾ ನಗರವೇ ಮೈದಳೆದಿತ್ತು. ಒಂದೆಡೆ ಬೆಣ್ಣೆಚೋರನಿಗೆ ಅಮ್ಮ ಲತ್ತಿ ಹಾಕುವುದು, ಮತ್ತೊಂದೆಡೆ ಮೊಸರು ಗಡಗಿ ಒಡೆಯುವ ಮುರಾರಿಯ ತುಂಟಾಟ. ಈ ಎಲ್ಲ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಇಲ್ಲಿನ ಶಾಂತಿಸದನ ಶಾಲೆ.

ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಹತ್ತಾರು ಪುಟಾಣಿಗಳು ನಂದಗೋಪಾಲನ ವೇಷದಲ್ಲಿ ಮಿಂಚಿದರೆ, ಅತ್ತ ರುಕ್ಮಿಣಿ, ಸತ್ಯಭಾಮೆ, ರಾಧೆಯರ ಪೋಷಾಕಿನಲ್ಲಿ ಮಕ್ಕಳು ಗಮನ ಸೆಳೆದರು. ಕೃಷ್ಣ ವೇಷಧಾರಿ ಮಕ್ಕಳು ನಡೆದುಕೊಂಡು ಬರುವುದನ್ನು ಕಂಡ ಶಾಲೆ ಶಿಕ್ಷಕರು ಮತ್ತು ಪಾಲಕರು ಕಂಡು ಕ್ಷಣಕಾಲ ಮಂತ್ರಮುಗ್ದರಾಗಿದ್ದರು. ಚಿಣ್ಣರ ಚಿಲಿಪಿಲಿ ಮುಕುಂದನ ವೇಷತೊಟ್ಟ ವಿವಿಧ ಭಂಗಿಯ ನೋಟಗಳು ಎಲ್ಲರನ್ನು ಸಂತಸದಲ್ಲಿ ತೇಲುವಂತೆ ಮಾಡಿತ್ತು.

ಶಾಲೆಯ ಆವರಣದಲ್ಲಿ ಮೊಸರು ಮಡಕೆ ಒಡೆಯುವ ಸ್ಪಧರ್ೆಯನ್ನ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮಕ್ಕಳು ನೃತ್ಯ ಮುಗಿಸಿಕೊಂಡು ಮೊಸರು ಮಡಕೆಯನ್ನ ಒಡೆಯಲು ಓಡೋಡಿ ಬಂದರು. ಕೈಯಲ್ಲಿದ್ದ ಕೊಳಲನ್ನು ಹಿಡಿದು ಮಡಿಕೆ ಒಡೆಯಲು ನಾಮುಂದೆ, ತಾಮುಂದು ಎಂದು ಪೈಪೋಟಿ ನಡೆಸಿದರು. ಅಮ್ಮಾ ನಿಮ್ಮ ಮನೆಗಳಲ್ಲಿ ರಂಗನ್ನ ಕಂಡೀರೇನಮ್ಮ, ನಮ್ಮ ಕೃಷ್ಣನ್ನ ಕಂಡೀರೇನಮ್ಮ ನೃತ್ಯಕ್ಕೆ ಪುಟಾಣಿಗಳು ಹಾಕಿದ ಹೆಜ್ಜೆ ಕ್ಷಣಕಾಲ ಬೇರೊಂದು ಲೋಕಕ್ಕೆ ಕೊರೆದೊಯ್ದಿತ್ತು.

ಕೃಷ್ಣನ ಆಸ್ಥಾನಕ್ಕೆ ಬಂದ ಸ್ನೇಹಿತ ಕಚೇಲನನ್ನು ದ್ವಾರಪಾಲಕರು ಬಾಗಿಲಲ್ಲಿ ತಡೆದಿರುವ ದೃಶ್ಯ ಮತ್ತು ಅರಮನೆಯ ಒಳಗಿನಿಂದ ಓಡೋಡಿ ಬಂದ ಕೃಷ್ಣ ಸುಧಾಮನನ್ನು ತಬ್ಬಿಕೊಂಡು ಸ್ನೇಹ ಹಸ್ತಚಾಚಿ ಕರೆದೊಯ್ಯುವ ಮಕ್ಕಳ ಕಿರು ನಾಟಕವಂತೂ ಅದ್ಭುತ ಎನಿಸಿತು. ಗೆಳೆಯ ತಂದ ಅವಲಕ್ಕಿಯನ್ನು ತಾನು ತಿನ್ನುತ್ತಿರುವ ದೃಶ್ಯವು ಸ್ನೇಹತ್ವಕ್ಕೆ ಮೆರುಗು ನೀಡಿತು.