ಜಿಲ್ಲೆ

ನಂಜುಂಡಸ್ವಾಮಿಗೆ ಅಧ್ಯಕ್ಷಗಿರಿ?

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ವೈ.ಸಿ.ನಾಗೇಂದ್ರ ಪದಚ್ಯುತಿ ಹಿನ್ನೆಲೆಯಲ್ಲಿ ಈ ಸ್ಥಾನ ಕೆಎಂಎ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿಗೆ ಒಲಿಯುವ ಸಾಧ್ಯತೆ ನಿಚ್ಛಳವಾಗಿದೆ.

15 ನಿರ್ದೇಶಕರು ಇರುವ ಚಾಮುಲ್ ಆಡಳಿತ ಮಂಡಳಿಯಲ್ಲಿ 14 ಜನರಿಗೆ ಮತದಾನದ ಹಕ್ಕು ಇದೆ. ಇದರಲ್ಲಿ ಒಬ್ಬರಾದ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರತಿನಿಧಿ ಮತದಾನದಿಂದ ದೂರ ಉಳಿಯುವುದರಿಂದ 13 ಮತಗಳ ಚಲಾವಣೆಯಾಗುತ್ತದೆ. 9 ಜನ ನಿರ್ದೇಶಕರು, ಒಬ್ಬರು ನಾಮ ನಿರ್ದೇಶಕರು, ಹಾಲು ಮಹಾ ಮಂಡಳದ ಪ್ರಧಾನ ವ್ಯವಸ್ಥಾಪಕ, ಪಶು ಪಾಲನಾ ಇಲಾಖೆ ಉಪ ನಿರ್ದೇಶಕ, ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಕಾಂಗ್ರೆಸ್ ಪ್ರಾಬಲ್ಯದ ಕಾರಣದಿಂದಾಗಿ ಅಧ್ಯಕ್ಷ ಸ್ಥಾನವನ್ನು ಕೈಪಡೆಯೇ ವಶ ಪಡಿಸಿಕೊಳ್ಳಲಿದೆ. ಮಧುವನಹಳ್ಳಿ ನಂಜುಂಡಸ್ವಾಮಿ ಅವರೇ ಅಧ್ಯಕ್ಷರಾಗಲಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರಿ ಶೀಲಾ ಅವರಿಗೆ ಕೆಎಂಎ್ ನಿರ್ದೇಶಕರ ಸ್ಥಾನ ಸಿಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ನಾನು ಅಧ್ಯಕ್ಷನಾದರೆ ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸದಲ್ಲಿ ಎಲ್ಲ ನಿರ್ದೇಶಕರೂ ಸೇರಿ ಅವಿಶ್ವಾಸ ನಿರ್ಣಾಯ ತಂದಿದ್ದಾರೆ. ವೈ.ಸಿ.ನಾಗೇಂದ್ರ ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವ ಕಾರಣದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಇರುವುದರಿಂದ ನಿರ್ದೇಶಕರು ಒಗ್ಗೂಡಿ ಅವಿಶ್ವಾಸ ತಂದಿದ್ದಾರೆ. ರೈತರ ಹಿತಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ. ನಾನು ಅಧ್ಯಕ್ಷನಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಂದ ಅನುದಾನ ಪಡೆದು ಚಾಮುಲ್ ಅಭಿವೃದ್ಧಿ ಪಡಿಸಲಾಗುವುದು. ಹಾಲು ಮಾತ್ರವಲ್ಲದೆ ಉಪ ಉತ್ಪನ್ನಗಳ ಉತ್ಪಾದನೆಯತ್ತಲೂ ಗಮನ ಹರಿಸಲಾಗುವುದು. ಮಧುವನಹಳ್ಳಿ ನಂಜುಂಡಸ್ವಾಮಿ, ಕೆಎಂಎ್ ನಿರ್ದೇಶಕ