ಜಿಲ್ಲೆ

ನಂಜಪ್ಪ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

ದಾವಣಗೆರೆ: ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಮೂರು ಕ್ಯಾನ್ಸರ್ ಪ್ರಕರಣಗಳಲ್ಲಿ ಅತ್ಯಂತ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಗರದ ನಂಜಪ್ಪ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಎನ್.ನಿಶ್ಚಲ್ ಹೇಳಿದರು.
 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರಿಗೆ ಸವಾಲಿನಿಂದ ಕೂಡಿದ್ದ ರೆಟ್ರೋ ಪೆರಿಟೋನಿಯಲ್ ಪ್ಯಾರಾಗ್ಲಿಯೋಮಾ ಸಿಂಡ್ರೋಮ್, ಯಕೃತ್ ಹಾಗೂ ಬಾಯಿ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
 ಚಿತ್ರದುರ್ಗದ 45 ವರ್ಷದ ಮಹಿಳೆ ಮೂರು ವರ್ಷಗಳಿಂದ ನಿರಂತರ ತಲೆನೋವು ಮತ್ತು ಅತಿವೇಗದ ಹೃದಯ ಬಡಿತ ಅನುಭವಿಸುತ್ತಿದ್ದರು. ಜತೆಗೆ ಡಯಾಬಿಟಿಸ್ ಮೆಲ್ಲಿಟಸ್, ಅಧಿಕ ರಕ್ತದೊತ್ತಡ ಮತ್ತು ಸಣ್ಣ ಪಾರ್ಶ್ವವಾಯು ಸಮಸ್ಯೆಯನ್ನೂ ಹೊಂದಿದ್ದರು. ರೋಗಿಯು ರೆಟ್ರೋ ಪೆರಿಟೋನಿಯಲ್ ಪ್ಯಾರಾಗ್ಲಿಯೋಮಾ ಸಿಂಡ್ರೋಮ್ ಸಮಸ್ಯೆ ಹೊಂದಿರುವುದನ್ನು ನಿಖರವಾಗಿ ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ನಡೆಸಿ 3 ಗೆಡ್ಡೆಗಳನ್ನು ತೆಗೆದುಹಾಕಲಾಗಿದೆ ಎಂದರು.
 ಡಯಾಬಿಟಿಸ್ ಮೆಲ್ಲಿಟಸ್, ಅಧಿಕ ರಕ್ತದೊತ್ತಡ ಹೊಂದಿದ್ದ 65 ವರ್ಷದ ಪುರುಷರೊಬ್ಬರಿಗೆ ಬಲ ಹೊಟ್ಟೆಯ ಭಾಗದಲ್ಲಿದ್ದ ಯಕೃತ್  ಕ್ಯಾನ್ಸರ್ ಪತ್ತೆಹಚ್ಚಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಗಂಭೀರ ಸವಾಲುಗಳಿದ್ದ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ವೈದ್ಯಕೀಯ ತಂಡದ ಪರಿಣಿತಿ ಮೇಲುಗೈ ಸಾಧಿಸಿದೆ ಎಂದು ಹೇಳಿದರು.
 ಮದ್ಯಪಾನ ಹಾಗೂ ತಂಬಾಕು ಸೇವನೆ ಅಭ್ಯಾಸ ಹೊಂದಿ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಯುವಕನೊಬ್ಬನಿಗೆ ಫ್ರೀ ಪ್ಲಾಪ್ ಕಾರ್ಯ ವಿಧಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮೂರು ಪ್ರಕರಣಗಳಲ್ಲಿ ರೋಗಿಗಳು ಚೇತರಿಕೆ ಕಂಡಿದ್ದಾರೆ ಎಂದು ತಿಳಿಸಿದರು.
 ನಂಜಪ್ಪ ಆಸ್ಪತ್ರೆ ಅಂಕಾಲಾಜಿ ಕ್ಯಾನ್ಸರ್ ವಿಭಾಗವು ವಿಭಾಗವು ಸುಧಾರಿತ ಫ್ಲೋರೋಸಿನ್ ಗೈಡೆಡ್ ಎಚ್‌ಡಿ ಲ್ಯಾಪರೋಸ್ಕೋಪಿ ಘಟಕ ಮತ್ತು ಆಪರೇಷನ್ ಥಿಯೇಟರ್‌ನ್ನು ಹೊಂದಿದೆ. ಜತೆಗೆ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ಅಂಕಾಲಾಜಿ ಎರಡರಲ್ಲೂ ಸಮಗ್ರ ಮತ್ತು ಸುಧಾರಿತ ಕ್ಯಾನ್ಸರ್ ಆರೈಕೆ ಒದಗಿಸುತ್ತದೆ ಎಂದರು.
 ಆಸ್ಪತ್ರೆಯ ಅರವಳಿಕೆ ತಜ್ಞ ಡಾ.ವಿಜಯ್ ಚಂದ್ರಪ್ಪ, ಡಾ.ಶಿವರಾಜ್, ಡಾ.ಗಣೇಶ್‌ಗೌಡ, ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿದ್ದರು.