ಜಿಲ್ಲೆ

ನಂಜನಗೂಡು ಟಿಕೆಟ್ ವಿಷಯದಲ್ಲಿ ಗೊಂದಲ ಸೃಷ್ಟಿ ಬೇಡ

ಮೈಸೂರು: ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರಿತು ಯಾರೂ ಗೊಂದಲ ಸೃಷ್ಟಿಸಬಾರದು ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕೋರಿದ್ದಾರೆ.


ನಂಜನಗೂಡು ಟಿಕೆಟ್ ವಿಷಯದಲ್ಲಿ ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಮಾನವೀಯತೆ ಮೊದಲು ರಾಜಕಾರಣ ನಂತರ ಎಂದು ಟ್ವಿಟ್ ಮಾಡಿದ್ದಾರೆ.


ನಂಜನಗೂಡು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ನಮ್ಮ ಬೆಂಬಲಿಗರು ಟಿಕೆಟ್ ವಿಷಯವನ್ನು ಮರು ಪರಿಶೀಲಿಸಬೇಕು. ಮಹದೇವಪ್ಪ ಅವರಿಗೇ ಟಿಕೆಟ್ ನೀಡಬೇಕೆಂದು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿರುವುದು ನನ್ನ ಗಮನಕ್ಕೆ ಬಂದಿದೆ.

ರಾಜಕೀಯದ ಆಚೆಗೂ ಕೂಡ ಮಾನವೀಯತೆ ಎಂಬುದು ಅತಿ ಮುಖ್ಯವಾದ ಸಂಗತಿಯಾಗಿದೆ. ಈ ಕಾರಣ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಗಲಿಕೆಯ ಈ ಸಂದರ್ಭದಲ್ಲಿ ರಾಜಕೀಯಕ್ಕಿಂತಲೂ ಮಾನವೀಯತೆ ಮುಖ್ಯ. ಆದ್ದರಿಂದ ನಂಜನಗೂಡು ಕ್ಷೇತ್ರದಲ್ಲಿ ಅವರ ಪುತ್ರ ದರ್ಶನ್ ಅವರನ್ನು ಬೆಂಬಲಿಸುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.


ಈ ನಿಟ್ಟಿನಲ್ಲಿ ದಯಮಾಡಿ ಯಾರೂ ಗೊಂದಲ ಸೃಷ್ಟಿ ಮಾಡದೆ ಸಮಚಿತ್ತತೆಯಿಂದ ವರ್ತಿಸಬೇಕು ಎಂದು ಕೋರಿದ್ದಾರೆ.