ಜಿಲ್ಲೆ

ನಾಲ್ಕು ಕ್ಷೇತ್ರಗಳು ನನ್ನ ಹೃದಯದಲ್ಲಿವೆ:ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ

ಬೆಂಗಳೂರು: ಬಿನ್ನಿಪೇಟೆ, ವಿಜಯನಗರ, ಗೋವಿಂದರಾಜನಗರ, ತುಮಕೂರು ಕ್ಷೇತ್ರಗಳು ನನ್ನ ಹೃದಯದಲ್ಲಿವೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ವಿ.ಸೋಮಣ್ಣ ಅವರ ಜನ್ಮದಿನ ನಿಮಿತ್ತ ಮಂಡಲ ಬಿಜೆಪಿ, ಗೋವಿಂದರಾಜನಗರ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಅವರ ಅಶೀರ್ವಾದ, ಒಡನಾಟದಿಂದಾಗಿ 45 ವರ್ಷಗಳಿಂದ ಜನಸೇವೆ ಮಾಡಲು ಸಾಧ್ಯವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಚುನಾವಣೆ ಪ್ರಚಾರ ಮಾಡಲು ಅವಕಾಶ ಸಿಕ್ಕಿತ್ತು. ಆದರೆ, ಅಲ್ಲಿನ ಜನರ ಪ್ರೀತಿ ವಿಶ್ವಾಸದಿಂದ 1.75 ಲಕ್ಷ ಮತಗಳ ಅಂತರದಿಂದ ಜಯಗಳಿಸಿದೆ. ಜನರ ಪ್ರೀತಿಯಿಂದ ಇದೆಲ್ಲ ಸಾಧ್ಯವಾಯಿತು. ಬೆಂಗಳೂರು ನಗರ ಸಮೀಪದಲ್ಲಿ ತುಮಕೂರು ಕ್ಷೇತ್ರವಿದೆ. ಇದು ಪುಣ್ಯಭೂಮಿ ಕ್ಷೇತ್ರವಾಗಿದೆ. ಹಾಗಾಗಿ, ಇದನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ಸೋಮಣ್ಣ ಎಂದರೆ ಸಾಮಾನ್ಯ ಕಾರ್ಯಕರ್ತ. ನನ್ನನು ಗುರುತಿಸಿ ಬೆಳಸಿದ ನಾಡಿನ ಜನರಿಗೆ, ಪಕ್ಷಕ್ಕೆ, ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಅದಿಚುಂಚಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕೇಂದ್ರ ಸಚಿವರು, ಬಳಿಕ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಉಚಿತ ಆರೋಗ್ಯ ಶಿಬಿರದಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು. ಶಾಸಕ ಸಿ.ಕೆ. ರಾಮಮೂರ್ತಿ, ಯುವ ಮುಖಂಡ ಡಾ. ಅರುಣ್​ ಸೋಮಣ್ಣ, ಆಡಳಿತ ಪಕ್ಷದ ಮಾಜಿ ನಾಯಕ ರವೀಂದ್ರ, ಮಂಡಲ ಅಧ್ಯ ವಿಶ್ವನಾಥಗೌಡ, ಪಾಲಿಕೆ ಮಾಜಿ ಸದಸ್ಯರಾದ ಮೋಹನ್​ಕುಮಾರ್​, ಬಾಬಿ ವೆಂಕಟೇಶ್​, ದಾಸೇಗೌಡ, ಸಿ.ಎಂ. ರಾಜಪ್ಪ, ಕನಕಪುರ ರಾಜಣ್ಣ, ಕ್ರಾಂತಿ ರಾಜು, ಬಿಜೆಪಿ ಮುಖಂಡರಾದ ವೇಣುಗೌಡ, ಶ್ರೀಧರ್​, ಡೊಡ್ಡವಿರಯ್ಯ, ರಮೇಶ್​, ಮಹಿಳಾ ಅಧ್ಯೆ ರತ್ಮಮ್ಮ ಮತ್ತಿತರರಿದ್ದರು.

ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ಮತ್ತು ಜಲಶಕ್ತಿ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಲು ಕ್ರಮ ತೆಗೆದುಕೊಂಡಿದ್ದೇನೆ. ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ 10 ವರ್ಷದಲ್ಲೇ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಿದೆ.

| ವಿ.ಸೋಮಣ್ಣ. ಕೇಂದ್ರ ಸಚಿವ