ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುರಗಿರಿ ಬೆಟ್ಟದ ಧರ್ಮಾಧಿಕಾರಿ ಲಕ್ಷ್ಮಣ ಶರಣರು ಜಾತ್ರೆಯ ಬಿತ್ತಿಪತ್ರ ಬಿಡುಗಡೆಗೊಳಿಸಿದರು. ಮುಖಂಡರಾದ ಕೆ.ಎಸ್. ಕಳ್ಳೆಪ್ಪನವರ, ಶ್ರೀಧರ, ಪಾಂಡುರಂಗ ಪೂಜಾರಿ, ತಿಮ್ಮನಗೌಡ ಪಾಟೀಲ, ರಾಮಣ್ಣ, ಶಿವಾನಂದ ಇದ್ದರು. 
ಜಿಲ್ಲೆ

ನ.೫ ರಿಂದ ಅಂಬಾರಿ ಉತ್ಸವ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಬೀಳಗಿ ತಾಲೂಕಿನ ಶ್ರೀಕ್ಷೇತ್ರ ಸುರಗಿರಿ ಬೆಟ್ಟದ ಭುವನೇಶ್ವರಿ ದೇವಸ್ಥಾನದಲ್ಲಿ ನ.೫ ರಿಂದ ಕೃಷಿ ಮೇಳ, ಭುವನೋತ್ಸವ ಅಂಬಾರಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸುರಗಿರಿ ಬೆಟ್ಟದ ಧರ್ಮಾಧಿಕಾರಿ ಲಕ್ಷ್ಮಣ ಶರಣರು ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.೫ ರಂದು ಬೆಳಗ್ಗೆ ೧೦ ಗಂಟೆಗೆ ಕೃಷಿ ಮೇಳ ಮಾಜಿ ಸಚಿವ ಎಸ್.ಆರ್.ಪಾಟೀಲ ಉದ್ಘಾಟಿಸಲಿದ್ದಾರೆ. ಶಾಸಕ ಜೆ.ಟಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿ.ಪ ಸದಸ್ಯ ಎಚ್.ಆರ್.ನಿರಾಣಿ ಮಳಿಗೆಗಳಿಗೆ ಚಾಲನೆ ನೀಡಲಿದ್ದಾರೆ. ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾರ್ಚಾಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ನಂತರ ಗೋಷ್ಠಿಗಳು ಆರಂಭವಾಗಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಸಾವಯವ ಮತ್ತು ನೈಸರ್ಗಿಕ ಕೃಷಿ ಕುರಿತು ಆನಂದ ಮಾಸ್ತಿಹೊಳಿ, ತೋಟಗಾರಿಕೆ ಜೊತೆಗೆ ಅರಣ್ಯ ಕೃಷಿ ಕುರಿತು ಟಿ.ಬಿ.ಅಳ್ಳೊಳ್ಳಿ, ಕೃಷಿ ಮಾರುಕಟ್ಟೆ ನಿರ್ವಹಣೆ ಮತ್ತು ಅವಕಾಶಗಳು ಕುರಿತು ಶ್ರೀಪಾದ ವಿಶ್ವೇಶ್ವರ, ಜೇನು ಸಾಕಾಣಿಕೆ ಕುರಿತು ಜೆ.ಬಿ. ಗೋಪಾಲಿ, ಸಂಜೆ ೪ ಗಂಟೆಗೆ ಮಣ್ಣು ಹಾಗೂ ನೀರಿನ ನಿರ್ವಹಣೆ, ಸಂರಕ್ಷಣೆ ಕುರಿತು ಎಸ್.ಬಿ. ಅಂಗಡಿ ಉಪನ್ಯಾಸ ನೀಡಲಿದ್ದಾರೆ.

ನ.೬ ರಂದು ಬೆಳಗ್ಗೆ ೧೦ ಗಂಟೆಗೆ ಕಬ್ಬಿನ ಬೆಳೆಯ ಬೇಸಾಯ ಕ್ರಮಗಳ ಕುರಿತು ಕಾಂತೇಶ ಗಾಂಡೋಳಕರ, ಕಬ್ಬಿನ ಬೆಳೆಯಲ್ಲಿ ಉರಿಮಲ್ಲಿಗೆ ನಿಯಂತ್ರಣ ಕುರಿತು ಸಂಜೀವ ರಡ್ಡಿ, ಕಬ್ಬಿನ ಬೆಳೆಯಲ್ಲಿ ಗೊಣ್ಣೆಹುಳು ನಿಯಂತ್ರಣ ಕುರಿತು ರಾಮನಗೌಡ ಎಚ್, ಈರುಳ್ಳಿ ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಕುರಿತು ವಸಂತ ಗಾಣಿಗೇರ ವಿಷಯ ಪ್ರಸುತ ಪಡಿಸಲಿದ್ದಾರೆ. ಕುಂದರಗಿ ಗ್ರಾಮದವರು ಅಮ್ಮನವರ ಉಡಿಯುವ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ಕ್ಕೆ ಕೃಷಿ ಮೇಳ ಸಮಾರೋಪ ನಡೆಯಲಿದ್ದು, ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿ ಪರ ರೈತರಾದ ತಿಪ್ಪಣ್ಣ ಗೌಡರ, ದೇವರೆಡ್ಡಿ ಅಗಸನಕೊಪ್ಪ ಅವರನ್ನು ಸನ್ಮಾನಿಸಲಾಗುವುದು. ಸಂಜೆ ೬.೩೦ಕ್ಕೆ ತುಳಸಿಗೇರಿ ಕುವೆಂಪು ಮಾದರಿ ಶಾಲೆ ವತಿಯಿಂದ ಮಲ್ಲಗಂಬ ಪ್ರದರ್ಶನ, ವಿ.ಡಿ. ಸಿಂಗರ್ಸ್ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ, ರಾತ್ರಿ ೧೦ ಗಂಟೆಗೆ ರೇವಣಸಿದ್ದೇಶ್ವರ ನಾಟ್ಯ ಕಲಾ ಸಂಘದ ವತಿಯಿಂದ ಅಜಾತ ನಾಗಲಿಂಗೇಶ್ವರ ಮಹಾತ್ಮೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ವೆಂಕನಗೌಡ ಪಾಟೀಲ ಮಾತನಾಡಿ, ನ.೭ಕ್ಕೆ ಸದೃಢ ಆರೋಗ್ಯಕ್ಕಾಗಿ ಉತ್ತಮ ಪರಿಹಾರ ಸಂಕಲ್ಪದೊಂದಿಗೆ ಅಂಬಾರಿ ಉತ್ಸವದ ಉದ್ಘಾಟನೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಲಿದ್ದು, ಶಾಸಕ ಜೆ.ಟಿ. ಪಾಟೀಲ ಬಾಗಿನ ಅರ್ಪಿಸಲಿದ್ದಾರೆ. ಕಲಾ ತಂಡಗಳ ಪ್ರದರ್ಶನಕ್ಕೆ ವಿಭಾಗೀಯ ಸಾರಿಗೆ ಅಧಿಕಾರಿ ಪಡಿಯಪ್ಪ ಮೇತ್ರಿ, ಧರ್ಮ ಧ್ವಜಾರೋಹಣ ವನ್ನು ಚಲನಚಿತ್ರ ನಿರ್ಮಾಪಕ ಘನಶ್ಯಾಮ ಭಾಂಡಗೆ ನೆರವೇರಿಸಲಿದ್ದಾರೆ ಎಂದರು.

ನ.೮ ರಂದು ಸಂಜೆ ೪ಕ್ಕೆ ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ, ಮೆಟ್ಟಿಲು ಪೂಜೆ, ಲಕ್ಷ ದೀಪೋತ್ಸವ, ಕೇರಳದ ಚಂಡೆವಾದ್ಯ ಕಲಾ ಬಳಗದಿಂದ ಕಲಾ ಪ್ರದರ್ಶನ, ರಾತ್ರಿ ೯ಕ್ಕೆ ಕುಂಟಕೋಣ ಮೂಕ ಜಾಣ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಮುಖಂಡರಾದ ಕೆ.ಎಸ್. ಕಳ್ಳೆಪ್ಪನವರ, ಶ್ರೀಧರ, ಪಾಂಡುರಂಗ ಪೂಜಾರಿ, ತಿಮ್ಮನಗೌಡ ಪಾಟೀಲ, ರಾಮಣ್ಣ, ಶಿವಾನಂದ ಇದ್ದರು.