ಜಿಲ್ಲಾಧ್ಯಕ್ಷ ಟಿ. ರಾಜಶೇಖರ್ 
ಜಿಲ್ಲೆ

ನ. ೨೫ ರಂದು ಬೆಳ್ಳಿ ಭವನ ಕಟ್ಟಡ ಉದ್ಘಾಟನೆ

ಚಿಕ್ಕಮಗಳೂರು: ಜಿಲ್ಲಾ ಒಕ್ಕಲಿಗರ ಸಂಘ ನಗರದ ಕೆ.ಎಂ. ರಸ್ತೆಯಲ್ಲಿ ಸುಮಾರು ೧೦.೨೫ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೆಳ್ಳಿ ಭವನ ಕಟ್ಟಡ ನ. ೨೫ ರಂದು ಉದ್ಘಾಟನೆಯಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ಆದಿಚುಂಚನಗಿರಿ ಸಂಸ್ಥಾನದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿ ಹಾಗೂ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಬೆಳ್ಳಿ ಬಾಗಿನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಬೆಳ್ಳಿ ಭವನ ಕಟ್ಟಡದ ಬಾಡಿಗೆಯಲ್ಲಿ ಮುಂದಿನ ದಿನಗಳಲ್ಲಿ ಜೆವಿಎಸ್ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಮತ್ತು ಜನಾಂಗದ ಅಭಿವೃದ್ಧಿಗೆ ವ್ಯಯಿಸಲು ಚಿಂತಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಸಿ. ಪ್ರಕಾಶ್, ಪದಾಧಿಕಾರಿಗಳಾದ ಕೆ.ಕೆ. ಮನುಕುಮಾರ್, ದಿನೇಶ್, ಲತೀಶ್, ಜಿ.ಎಸ್. ಚಂದ್ರಪ್ಪ, ಸಂಸ್ಥೆಯ ಸಿಇಓ ಕುಳ್ಳೇಗೌಡ ಉಪಸ್ಥಿತರಿದ್ದರು.