ಜಿಲ್ಲೆ

ನ.6ರವರೆಗೆ ಹೆಸರು ಸೇರ್ಪಡೆಗೆ ಅವಕಾಶ

ಚಿತ್ರದುರ್ಗ: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಿದ್ದು, ನಮೂನೆ-18ರಲ್ಲಿ ಮತಪಟ್ಟಿಯಲ್ಲಿ ಹೆಸರು ಸೇರಿಸಲು ನವೆಂಬರ್ 6ರವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಶನಿವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ರಾಜ್ಯ ಮುಖ್ಯಚುನಾವಣಾಧಿಕಾರಿ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗಾಗಿ ಮತದಾರ ಪಟ್ಟಿ ತಯಾರಿಕೆಗೆ ವೇಳಾಪಟ್ಟಿ ನಿಗಧಿಪಡಿಸಿದ್ದಾರೆ. 1ನವೆಂಬರ್ 2025ಕ್ಕೆ ಇದ್ದಂತೆ ಮತದಾರರ ಪಟ್ಟಿ ಸಿದ್ಧಪಡಿಸಲಾಗವುದು. ಇದಕ್ಕಾಗಿ ಜಿಲ್ಲೆಯ ಎಲ್ಲ ತಾಲೂಕುಗಳು, ನಗರಸಭೆ ವ್ಯಾಪ್ತಿಯಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ನಿರ್ದಿಷ್ಟಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ನವೆಂಬರ್ 20ರವರೆಗೆ ಕರಡು ಮತದಾರರ ಪಟ್ಟಿ ಸಿದ್ಧಪಡಿಸಲಾಗುವುದು. ನವೆಂಬರ್ 25 ರಂದು ಕರಡು ಪ್ರತಿಗೆ ಡಿಸೆಂಬರ್ 10 ರೊಳಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಡಿಸೆಂಬರ್ 25ರ ಒಳಗೆ ಆಕ್ಷೇಪಣೆಗಳ ವಿಲೇವಾರಿಗೆ ಕ್ರಮ ವಹಿಸಲಾಗುವುದು. 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಡಿಸಿ ಹೇಳಿದರು.

ಹೆಸರು ನೋಂದಾಯಿಸಲು ಬಯಸುವಂಥವರು ಪದವೀಧರ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು. 1ನವೆಂಬರ್ 2025 ನಿರ್ದಿಷ್ಟಪಡಿಸಿದ ಅರ್ಹ ದಿನಾಂಕವಾಗಿದ್ದು, ಇದಕ್ಕೂ ಕನಿಷ್ಠ 3 ವರ್ಷಗಳ ಮೊದಲು ಪದವಿ/ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಿದ್ಯಾರ್ಹತೆ ಪ್ರಮಾಣ ಪತ್ರಗಳೊಂದಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಇತ್ಯಾದಿ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಚುನಾವಣೆ ತಹಸೀಲ್ದಾರ್ ನಾಗವೇಣಿ, ಶಿರಸ್ತೇದಾರ್ ಮಲ್ಲಿಕಾರ್ಜುನ ನಾಯಕ, ವಿವಿಧ ಪಕ್ಷಗಳ ಮುಖಂಡರಾದ ಡಿ.ಎನ್. ಮೈಲಾರಪ್ಪ, ಸಿ.ಜೆ.ನಾಸೀರುದ್ದೀನ್, ಪ್ರಕಾಶ್ ರಾಮಾನಾಯ್ಕ, ಡಿ. ಗೋಪಾಲಸ್ವಾಮಿ ನಾಯಕ, ಯಶವಂತ್‌ಕುಮಾರ್ ಇದ್ದರು.

ಅಧಿಕಾರಿಗಳಿಗೆ ತರಬೇತಿ: ಮತದಾರರ ಪಟ್ಟಿ ತಯಾರಿಕೆ ಕುರಿತು ಅಧಿಕಾರಿಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಡಿಸಿ ಕಚೇರಿಯಲ್ಲಿ ತರಬೇತಿ ನೀಡಲಾಯಿತು. ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ ಹಾಗೂ ಜಿಲ್ಲಾ ಮಾಸ್ಟರ್ ಟ್ರೈನರ್ ಸಹಾಯಕ ಮತದಾರರ ನೋಂದಣಾಧಿಕಾರಿ, ನಿರ್ದಿಷ್ಟಾಧಿಕಾರಿಗಳಿಗೆ ತರಬೇತಿ ನೀಡಿದರು.

ಚಿತ್ರದುರ್ಗ ತಹಸೀಲ್ದಾರ್ ಗೋವಿಂದರಾಜು ಇದ್ದರು.