ಮೈಸೂರು: ಎನ್‌ಐಇ ಸಂಸ್ಥೆಯು ಜರ್ಮನಿಯ ಸಂಸ್ಥೆಗಳಾದ ಟೆಕ್ ಫಾರ್ ಫ್ಯೂಯೆಲ್ ಹಾಗೂ ಒಡಬ್ಲುೃಐ ಸೈನ್ಸ್ ಫಾರ್ ಫ್ಯೂಯೆಲ್ ಸಹಯೋಗದಲ್ಲಿ ಸ್ವಚ್ಛ(ಜೈವಿಕ) ಇಂಧನ ಸಮಾವೇಶವನ್ನು ನ.2 ಮತ್ತು 3ರಂದು ನಗರದ ಸೈಲೆಂಟ್ ಶೋರ್ಸ್ ಹೋಟೆಲ್‌ನ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಜೈವಿಕ ಇಂಧನ ನೀತಿ ಅನ್ವಯ 8 ವರ್ಷಗಳಲ್ಲಿ ಆಗಿರುವ ಬೆಳವಣಿಗೆ ಹಾಗೂ ಅಭಿವೃದ್ಧಿ ಪಥದ ಬಗ್ಗೆ ಚಿಂತನ-ಮಂಥನ ನಡೆಸಲಿದೆ. ಜತೆಗೆ, ಇತ್ತೀಚಿನ ವರ್ಷಗಳಲ್ಲಿ ಆಗಿರುವ ತಂತ್ರಜ್ಞಾನ ಅಭಿವೃದ್ಧಿ, ನೂತನ ಆಲೋಚನೆಗಳು ಹಾಗೂ ನೀತಿಗಳ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪ್ರೊ. ಶ್ಯಾಮಸುಂದರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಗುರಿ, ಆದ್ಯತೆ ಹಾಗೂ ಅವಕಾಶಗಳ ಬಗ್ಗೆ ಉದ್ಯಮಿಗಳು ಹಾಗೂ ಬಂಡವಾಳ ಹೂಡಿಕೆದಾರರಿಗೆ ಮಾಹಿತಿ ನೀಡುವ ವೇದಿಕೆಯಾಗಲಿದೆ. ಜತೆಗೆ ಇದು ತಂತ್ರಜ್ಞಾನ ಪರಿಣಿತರು, ಸಂಶೋಧಕರು, ಶೈಕ್ಷಣಿಕ ತಜ್ಞರು, ಸಾಹಸಿ ಬಂಡವಾಳ ಹೂಡಿಕೆದಾರರು, ನೀತಿ ರೂಪಿಸುವವರು, ಸರ್ಕಾರೇತರ ಸಂಸ್ಥೆಗಳು ಮೊದಲಾದವುಗಳ ನಡುವೆ ಸಂಪರ್ಕ ಸೇತುವೆಯಾಗಲಿದೆ. ಈ ವೇಳೆ ವಿಜ್ಞಾನಿಗಳಿಗೆ ಪೋಸ್ಟರ್ ವಿನ್ಯಾಸ ಸ್ಪರ್ಧೆಯೂ ಇರಲಿದೆ ಎಂದು ಹೇಳಿದರು.
ನ.2ರಂದು ಎನ್‌ಐಇ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎಸ್. ರಂಗನಾಥ್, ಸದಸ್ಯ ಎನ್. ಸತ್ಯಕುಮಾರ್ ಹಾಗೂ ಪ್ರಾಚಾರ್ಯರಾದ ಪ್ರೊ.ರೋಹಿಣಿ ನಾಗಪದ್ಮ ಪಾಲ್ಗೊಳ್ಳುವರು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆನ್‌ಲೈನ್ ಮುಖಾಂತರ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.