ಹಾಸನ: ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿಯ ಮೊದಲನೇ ವರ್ಷದ ಹಾಗೂ 2024-25ನೇ ಸಾಲಿನ ನಾಟಕೋತ್ಸವವನ್ನು ನ.29 ರಿಂದ ಡಿ.7ರ ವರೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ರವಿಕುಮಾರ್ ತಿಳಿಸಿದರು.
29 ರಂದು ರತ್ನ ಮಾಂಗಲ್ಯ ಸಾಮಾಜಿಕ ನಾಟಕ, 30 ರಂದು ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ, ಡಿ.1 ರಂದು ದಕ್ಷಯಜ್ಞ, 2 ರಂದು ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ, 3 ರಂದು ಸಂಪೂರ್ಣ ರಾಮಾಯಣ, 4 ರಂದು ಕುರುಕ್ಷೇತ್ರ, 5 ಮತ್ತು 6 ರಂದು ಸಂಪೂರ್ಣ ರಾಮಾಯಣ, 7 ರಂದು ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕ ಪ್ರದರ್ಶನಗೊಳ್ಳಲಿವೆ ಸೋಮವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಒಂದು ನಾಟಕ ಪ್ರದರ್ಶನ ಮಾಡಬೇಕಾದರೆ ಎರಡೂವರೆ ಲಕ್ಷ ಖರ್ಚಾಗುತ್ತದೆ. ಆದರೆ ಒಂದು ತಂಡಕ್ಕೆ 75 ಸಾವಿರ ನಿಗದಿ ಮಾಡಲಾಗಿದೆ. ಇದರಲ್ಲೇ ಬಾಡಿಗೆ, ಸೀನರಿ ಎಲ್ಲವನ್ನೂ ಸಂಭಾಳಿಸಬೇಕು, ಎಷ್ಟೋ ಸಲ ನಮ್ಮ ಕೈಯಿಂದಲೇ ಹಣ ಹಾಕಬೇಕಿದೆ ಎಂದರು. ಎಲ್ಲರೂ ಆಗಮಿಸಿ ನಾಟಕ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ಸಲಹೆಗಾರರಾದ ರಂಗಸ್ವಾಮಿ ಮಾತನಾಡಿ, ಎಲ್ಲರಿಗೂ ಉಚಿತ ಪ್ರವೇಶ ಇದ್ದು, 9 ದಿನವೂ ಮಧ್ಯಾಹ್ನದ ವೇಳೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಶೇಖರಪ್ಪ ಮಾತನಾಡಿ, ಕಲಾವಿದರಿಗೆ ಮಾಸಿಕ 3000 ಸಾವಿರ ರೂ. ಹೆಚ್ಚಳ ಮಾಡಲಾಗಿದ್ದು, ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಿಗೆ ಧನ್ಯವಾದ ಹೇಳಿದರು. ಹಾಗೆಯೇ ಪ್ರತಿ ಕಲಾವಿದರಿಗೆ ನೀಡುವ ಪ್ರಯೋಜನ ಅನುದಾನ ಸುಮಾರು 15-20 ಲಕ್ಷ ಬಾಕಿ ಇದ್ದು, ಕಳೆದ 1 ವರ್ಷದಿಂದ ಬಿಡುಗಡೆ ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಸೋಮಶೇಖರ್ ಇತರಿದ್ದರು.