ಹಾಸನ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚನ್ನರಾಯಪಟ್ಟಣ ಮಾರುತಿ ನಗರದ ಕೊಳದ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಗಂಗಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನಮ್ ಅಧ್ಯಕ್ಷ ವಿಶ್ವನಾಥ್ ದೀಕ್ಷಿತ್ ಅವರು ತಿಳಿಸಿದರು.
ದೀಕ್ಷಿತ್ ಪ್ರತಿಷ್ಠಾನಮ್ ವತಿಯಿಂದ ಹರಿದ್ವಾರ-ಕಾಶಿ ಮಾದರಿಯಲ್ಲಿ ಗಂಗಾರತಿಯನ್ನು ನ.18ರ ಸಂಜೆ 5ಕ್ಕೆ ನೆರವೇರಿಸಲಾಗುವುದು. ಧಾರ್ಮಿಕ ಆಚರಣೆ ಮೂಲಕ ದೇಶದ ನೆಲ-ಜಲದ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ದೇಶದ ಪವಿತ್ರ ನದಿಗಳ ಬಗ್ಗೆ ಮಾಹಿತಿ ನೀಡುವುದು. ಸಮಾಜದ ಎಲ್ಲಾ ಸ್ತರದವರಿಗೂ ಪೂಜೆ ಮತ್ತು ಧಾರ್ಮಿಕ ಭಾವನೆ ಮೂಡಿಸುವುದು, ಹಿಂದೂ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಪ್ರತಿಷ್ಠಾನಮ್‌ನಿಂದ ಈ ಮೊದಲು ತುಳಸಿಪೂಜೆ, ಗೋಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಬಾರಿ ಗಂಗಾರತಿ ಮೂಲಕ ಜನರನ್ನು ಧಾರ್ಮಿಕ ಭಾವನೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. 300 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.
ಪ್ರತಿಷ್ಠಾನಮ್ ಪ್ರಮುಖರಾದ ಶ್ಯಾಮ್ ಸುಂದರ್ ಅಣೇನಹಳ್ಳಿ, ತೇಜಸ್, ಶ್ರೀನಿವಾಸ್, ಲೋಕೇಶ್ ಹಾಜರಿದ್ದರು.