ಹಾಸನ: ನಗರದ ರಂಗೋಲಿ ಹಳ್ಳದಲ್ಲಿರುವ ಶ್ರೀನೀಲಕಂಠೇಶ್ವರ ಸಮುದಾಯ ಭವನದಲ್ಲಿ ನ. 17 ಮತ್ತು 18 ರಂದು ಭಾನುವಾರ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ನ 12ನೇ ಜಿಲ್ಲಾ ಸಮೇಳನ ಆಯೋಜಿಸಲಾಗಿದೆ ಎಂದು ಸಿಪಿಐ(ಎಂ) ಜಿಲ್ಲಾಧ್ಯಕ್ಷ ಧರ್ಮೇಶ್ ಅವರು ತಿಳಿಸಿದರು.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪ್ರಗತಿಪರ ಚಿಂತಕರಿಂದ ವಿಚಾರ ಮಂಡನೆ ನಡೆಯಲಿದೆ. ಸಿಪಿಐನ ರಾಜ್ಯ ಮುಖಂಡರು ಸಮೇಳನದಲ್ಲಿ ಭಾಗವಹಿಸುತ್ತಾರೆ ಎಂದು ಗುರುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಹೇಮಾವತಿ ಪ್ರತಿಮೆಯಿಂದ ಸಮೇಳನ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಸಾರ್ವಜನಿಕ ಸಭೆ ಆರಂಭವಾಗಲಿದೆ. ಜಿಲ್ಲೆಯ 150 ಸದಸ್ಯರು ಪ್ರತಿನಿಧಿಗಳಾಗಿ ಭಾಗವಹಿಸಿ ಲಿಖಿತವಾಗಿ ಮಂಡಿಸಲಾಗುವ ಕರಡು ಕಾರ್ಯದರ್ಶಿ ವರದಿ ಮತ್ತು ರಾಜಕೀಯ, ಸಂಘಟನಾ ನಿರ್ಣಯಗಳ ಮೇಲೆ ಚರ್ಚಿಸಲಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷದ ಭವಿಷ್ಯ, ಕರ್ತವ್ಯ ಹಾಗು ನೂತನ ಜಿಲ್ಲಾ ಸಮಿತಿ ಆಯ್ಕೆ ಪ್ರಕ್ರಿಯೆ ಕೂಡ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಜೆ.ಪಿ.ಸತ್ಯನಾರಾಯಣ, ಎಚ್.ಆರ್.ನವೀನ್‌ಕುಮಾರ್, ಸೌಮ್ಯ, ಅರವಿಂದ್ ಇದ್ದರು.