ಗೋಣಿಕೊಪ್ಪ: ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಗೋಣಿಕೊಪ್ಪ ಪ್ರಗತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನವೆಂಬರ್ 14ರಂದು ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಮಲ್ಲಂಡ ಎನ್.ಪ್ರಕಾಶ್ ತಿಳಿಸಿದರು.
ಗೋಣಿಕೊಪ್ಪ ಪ್ರೆಸ್ ಕ್ಲಬ್‌ನಲ್ಲಿ ನೃತ್ಯ ಸ್ಪರ್ಧೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗೋಣಿಕೊಪ್ಪ ಬಸ್ಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಜಿಲ್ಲಾ ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಬಸ್ ನಿಲ್ದಾಣದಲ್ಲಿ ಗ್ರೀಸ್ ಹಚ್ಚಿದ ಕಂಬ ಏರುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗೋಣಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಕರೊನಾ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅವರನ್ನು ಸನ್ಮಾನಿಸಲಾಗುವುದು. ಉತ್ತಮ ಸಾಮಾಜಿಕ ಸೇವೆ ನೀಡುತ್ತಿರುವ ಆಟೋ ಚಾಲಕರೊಬ್ಬರನ್ನು ಗೌರವಿಸಲಾಗುವುದು. ಪಟ್ಟಣದ ಅಂಗಡಿ ಮಳಿಗೆಗಳು, ಆಟೋ, ದ್ವಿಚಕ್ರ ಇನ್ನಿತರ ವಾಹನಗಳಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಡಾಡು ಜೋಸೆಫ್ ಮಾತನಾಡಿ, ಜಿಲ್ಲಾ ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆಗೆ ಸುಮಾರು 11 ತಂಡಗಳು ಈಗಾಗಲೇ ನೋಂದಾಯಿಸಿಕೊಂಡಿವೆ. ಆಸಕ್ತ ತಂಡಗಳು ನವೆಂಬರ್ 10ರೊಳಗೆ ತಂಡದ ಹೆಸರನ್ನು ಮೊ: 9480212564/ 8105822594 ಸಂಖ್ಯೆಗೆ ನೋಂದಾಯಿಸಿಕೊಳ್ಳಬಹುದು ಎಂದರು.
ಸಂಘದ ಉಪಾಧ್ಯಕ್ಷ ನಾಪಂಡ ಕೆ.ಭೀಮಯ್ಯ, ಸಹಕಾರ್ಯದರ್ಶಿ ನಸೀರ್, ಖಜಾಂಚಿ ವಿನು, ನಿರ್ದೇಶಕ ಧನಂಜಯ ಇದ್ದರು.