ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಬೈಲೂರ ಮತ್ತು ಗಂಗಾವತಿ ನಡುವಿನ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಗೆ ಸಿಪಿಐ ಗಿರೀಶ ಚಾಲನೆ ನೀಡಿದರು. 
ಜಿಲ್ಲೆ

ಧ್ವನಿವರ್ಧಕದಲ್ಲಿ ಕೂಗಿ ಕರೆದರೂ ಹಾಜರಾಗಲು ತಡ ಮಾಡಿದ ಕ್ರೀಡಾಪಟುಗಳು

ಬೆಳಗಾವಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕಿತ್ತೂರು ಉತ್ಸವದಲ್ಲಿ ಆಯೋಜಿಸಿರುವ ಕ್ರೀಡಾ ಪಂದ್ಯಾವಳಿಗೆ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಉತ್ಸವ ಮುಂದೂಡಿದ ಹಿನ್ನೆಲೆಯಲ್ಲಿ ಸೋಮವಾರ ನೇರವಾಗಿ ಕ್ರೀಡಾಂಗಣಕ್ಕೆ ಆಗಮಿಸಲು ಕ್ರೀಡಾಪಟುಗಳಿಗೆ ತಡವಾಗಿದ್ದರಿಂದ, ಬೆಳಗ್ಗೆ 10ಕ್ಕೆ ಕಿತ್ತೂರಿನ ಬಾಲಕಿಯರ ಪ್ರೌಢ ಶಾಲೆಯ ಮೈದಾನದಲ್ಲಿ ಆರಂಭಗೊಳ್ಳಬೇಕಿದ್ದ ಬಾಲಕರ ಮತ್ತು ಬಾಲಕಿಯರ ಮುಕ್ತ ವಾಲಿಬಾಲ್ ಮತ್ತು ಕಬಡ್ಡಿ ಕ್ರೀಡಾಕೂಟಕ್ಕೆ ಆಯೋಜಕರು ಕ್ರೀಡಾಪಟುಗಳನ್ನು ಧ್ವನಿವರ್ಧಕಗಳ ಮೂಲಕ ಸುಮಾರು ಮೂರು ಗಂಟೆಗೂ ಅಧಿಕ ಕಾಲ ಕರೆದು, ಪಂದ್ಯಾವಳಿಗೆ ಚಾಲನೆ ನೀಡಬೇಕಾಯಿತು. ಪಂದ್ಯಾವಳಿ ವೇಳೆ ಮೈದಾನದಲ್ಲಿ ವೀಕ್ಷಕರ ಕೊರತೆ ಕಂಡುಬಂತು.

ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಚಿನ್ನಪ್ಪ ಮುತ್ನಾಳ ಉದ್ಘಾಟಿಸಿದರು. ಕಬಡ್ಡಿ ಪಂದ್ಯಾವಳಿಯನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಉಳವಪ್ಪ ಉಳ್ಳಾಗಡ್ಡಿ ಉದ್ಘಾಟಿಸಿದರು. ಬಾಲಕಿಯರ ವಾಲಿಬಾಲ್ ವಿಭಾಗದಲ್ಲಿ ಬೆಳಗಾವಿ, ಗಂಗಾವತಿ, ಧಾರವಾಡ, ಮಂಗ್ಯಾನಕೊಪ್ಪ, ಬೈಲೂರ, ದೇಗಾಂವ, ಬೀಡಿ, ಕೇಸರಕೊಪ್ಪ ಸೇರಿ ವಿವಿಧೆಡೆಯಿಂದ ಬಂದ ತಂಡಗಳು ಹೆಸರನ್ನು ನೋಂದಾಯಿಸಿದ್ದವು. ಆದರೆ, ಬೆರಳೆಣಿಕೆ ತಂಡಗಳು ಮಾತ್ರ ಭಾಗವಹಿಸಿದ್ದವು.

ಬಾಲಕರ ವಾಲಿಬಾಲ್ ವಿಭಾಗದಲ್ಲಿ ಎಂ.ಕೆ.ಹುಬ್ಬಳ್ಳಿ, ಹುಣಶೀಕಟ್ಟಿ, ಗಂದಿಗವಾಡ, ನೇಗಿನಹಾಳ, ವೀರಾಪುರ, ಮಂಟಮುರಿ, ದಾಸ್ತಿಕೊಪ್ಪ, ಮೂಗಬಸವ ಸೇರಿ ವಿವಿಧ ತಂಡಗಳು ಹೆಸರನ್ನು ನೋಂದಾಯಿಸಿದ್ದವು. ಬೈಲೂರ ಮತ್ತು ಗಂಗಾವತಿ ನಡುವಿನ ಬಾಲಕಿಯರ ವಾಲಿಬಾಲ್ ಪದ್ಯಾವಳಿಗೆ ಸಿಪಿಐ ಗಿರೀಶ ಚಾಲನೆ ನೀಡಿದರು. ಪಿಎಸ್‌ಐ ಅನೀಲಕುಮಾರ, ಎಎಸ್‌ಐ ತಿಪ್ಪಣ್ಣ ಬೋವಿ, ಕ್ರೀಡಾ ಇಲಾಖೆಯ ಉಪನಿರ್ದೇಶಕ ಜಿತೇಂದ್ರ ಪಡ್ನಾಳ, ತರಬೇತುದಾರ ಬಿ.ಸಿ.ಹೊಸಮಠ, ಎನ್.ಎ.ಮಿರಜಕರ, ಶಿವಾನಂದ ಹನುಮಸಾಗರ, ಬಸವರಾಜ ಮಲಕನ್ನವರ, ಬಸವರಾಜ ಗುಡೆನ್ನವರ, ಶ್ಯಾಮ ಶಿಲ್ಲೆದಾರ ಇತರರಿದ್ದರು.