ಕಲಬುರಗಿ: ಕಾರಣಾಂತರಗಳಿಂದ ಪ್ರೀತಿಸುವ ಮನಸುಗಳಿಗಿಂತ ಮನುಷ್ಯತ್ವದ ಹಿನ್ನೆಲೆಯ ಪ್ರೀತಿ ದೊಡ್ಡದು ಎಂದು ಧಾರವಾಡದ ಹಿರಿಯ ಕಲಾವಿದ ಡಾ.ಶಶಿಧರ ನರೇಂದ್ರ ಹೇಳಿದರು.
ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೇಡಂನ ಸಂಸ್ಕೃತಿ ಪ್ರಕಾಶನ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಅಂಬುಜಾ ಮಳಖೇಡಕರ್ ಬರೆದ ಐದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪದಗಳ ಜೋಡಣೆ ಕಾವ್ಯ ವಾಗಲಾರದು. ಬದಲಿಗೆ ಧ್ವನಿಪೂರ್ಣವಾದ ಮಾತುಗಳೇ ಕಾವ್ಯವಾಗುತ್ತದೆ. ಡಾ.ಅಂಬುಜಾ ಅವರ ಎಲ್ಲ ಕವನಗಳಲ್ಲಿ ಈ ರೀತಿಯ ಸಾಲುಗಳು ಹೇರಳವಾಗಿವೆ ಎಂದರು.
ಡಾ.ಅಂಬುಜಾ ಮಳಖೇಡಕರ್ ರಚಿಸಿದ ಗೊಂಬೆಯ ಜೀವನ, ಕೃತಿಯನ್ನು ಕನ್ನಡ ಉಪನ್ಯಾಸಕಿ ಡಾ.ವಿದ್ಯಾವತಿ ಪಾಟೀಲ್ ಪರಿಚಯಿಸಿದರು. ಮನ ಹರಿ ಧ್ಯಾನ ಮಂದಿರ, ದಡ ಸೇರಿಸೆನ್ನ ಹರಿಯೇ ಕೃತಿಗಳನ್ನು ಕವಯತ್ರಿ ಕಾವ್ಯಶ್ರೀ ಮಹಾಗಾಂವ, ಪ್ರೇಮ ಪದನಿಸ ಕೃತಿಯನ್ನು ಉಪನ್ಯಾಸಕ ಡಾ.ಎಂ.ಬಿ.ಕಟ್ಟಿ,ರಾಜನ ನಂಟು ಕನ್ನಡಿಯ ಗಂಟು' ಕೃತಿಯನ್ನು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪರಿಚಯಿಸಿದರು.
ಸೇಡಂನ ಸಂಸ್ಕೃತಿ ಪ್ರಕಾಶನದ ಸಂಚಾಲಕ ಪ್ರಭಾಕರ ಜೋಶಿ ಮಾತನಾಡಿ, ತಾಲೂಕು ಕೇಂದ್ರವೊಂದರಲ್ಲಿದ್ದುಕೊಂಡು ನೂರಾರು ಕೃತಿಗಳನ್ನು ಪ್ರಕಟಿಸುವ ಮೂಲಕ ಹಲವಾರು ಯುವ ಲೇಖಕರಿಗೆ ವೇದಿಕೆ ಒದಗಿಸಿದೆ ಎಂದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಜೇಂದ್ರ ಬಿ.ಕೊಂಡ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಡಾ.ಅಂಬುಜಾ ಮಳಖೇಡಕರ್ ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ಕವಿಗಳಾದ ಎ.ಕೆ.ರಾಮೇಶ್ವರ, ಡಾ.ನಾಗೇಂದ್ರ ಮಸೂತಿ, ಡಾ.ಚಿ.ಸಿ.ನಿಂಗಣ್ಣ, ಬಿ.ಎಚ್.ನಿರಗುಡಿ, ಅಂಬಾರಾಯ ಕೋಣಿನ್, ಸತಾಳಕರ್, ಸಂಜೀವ ಸಿರನೂರಕರ, ರವೀಂದ್ರ ಇಂಜಳ್ಳೀಕರ, ಸಿದ್ದಪ್ಪ ತಳ್ಳಳ್ಳಿ ಇತರರಿದ್ದರು. ಆರ್.ಜೆ.ಮಂಜು ನಿರೂಪಣೆ ಮಾಡಿದರು.