ಜಿಲ್ಲೆ

ಧ್ವನಿ ಇಲ್ಲದವರ ಪಾಲಿನ ಧಣಿ ದೇವರಾಜ ಅರಸು

ಮೈಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಸಾಧನೆ ಮತ್ತು ಕೊಡುಗೆ ಅವಿಸ್ಮರಣೀಯ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಬಣ್ಣಿಸಿದರು.

ಡಿ.ದೇವರಾಜ ಅರಸು ಅವರ 110ನೇ ಜನ್ಮದಿನ ಅಂಗವಾಗಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಧ್ವನಿ ಕೊಟ್ಟ ಧಣಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಸು ಅವರು ನಿಜವಾಗಿಯೂ ಧ್ವನಿ ಇಲ್ಲದವರ ಪಾಲಿಗೆ ಧ್ವನಿ ಕೊಟ್ಟ ಧಣಿ. ಸದಾ ಅಸಂಘಟಿತ ಸಮುದಾಯಗಳ ಪರವಾಗಿದ್ದ ಅವರು, ರಾಜ್ಯದ ಇತಿಹಾಸದಲ್ಲಿ ಯಾರೂ ಮಾಡಲಾಗದಷ್ಟು ಜನಪರ ಕಾರ್ಯವನ್ನು ಮಾಡುವ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ.

ಬಡವರ ಕಂಡರೆ ಮರುಗುತ್ತಿದ್ದ ಅವರು ಜೀತಪದ್ಧತಿ, ತಲೆ ಮೇಲೆ ಮಲ ಹೊರುವುದು ನಿಷೇಧ, ಉಳುವವನೇ ಭೂಮಿಯ ಒಡೆಯ ಯೋಜನೆ ಜಾರಿಗೊಳಿಸಿ ಭೂ ರಹಿತರನ್ನು ಭೂ ಮಾಲೀಕರನ್ನಾಗಿ ಮಾಡಿದರು ಎಂದು ಸ್ಮರಿಸಿದರು.

ನಿವೃತ್ತ ಪ್ರಾಧ್ಯಾಪಕಿ ಭ್ರಮರ ಬಹದ್ದೂರ್, ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಸ್ಥಾಪಕ ಡಾ.ಜಗನ್ನಾಥ ಶೆಣೈ, ಹಿರಿಯ ಯೋಗ ಶಿಕ್ಷಕ ಜಗದೀಶ್ ಶೆಟ್ಟರ್, ಪತ್ರಿಕಾ ಛಾಯಾಗ್ರಾಹಕ ಲಕ್ಷ್ಮೀ ನಾರಾಯಣ ಯಾದವ್, ಗೋವಾ ಚಳವಳಿ ಹೋರಾಟಗಾರ ಗಿರಿಜಾ ಶಂಕರ್ ಪಾಟೀಲ್, ಸಹ ಪ್ರಾಧ್ಯಾಪಕ ಡಾ.ಆನಂದ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅರಸು ಜಾಗೃತ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎಚ್.ಎ.ವೆಂಕಟೇಶ್, ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್, ವಿಶ್ರಾಂತ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಮರ್‌ನಾಥರಾಜೇ ಅರಸ್, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್ ಇನ್ನಿತರರಿದ್ದರು.