ಬಾಗಲಕೋಟೆ: ರಾಷ್ಟ್ರ ಧ್ವಜ ತಲುಪದೆ ಇರುವ ಮನೆಗೆ ತ್ರಿವರ್ಣ ರಾಷ್ಟ್ರ ಧ್ವಜವನ್ನು ವಿತರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸುವುದು ಎಲ್ಲ ಸರ್ಕಾರಿ ನೌಕರರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರ ಧ್ವಜ ವಿತರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತೆ ಪ್ರೋತ್ಸಾಹ ನೀಡಲು ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿರುತ್ತದೆ. ಆಕಸ್ಮಿಕವಾಗಿ ಯಾವುದಾದರೂ ಮನೆಗೆ ಒಂದು ವೇಳೆ ರಾಷ್ಟ್ರ ಧ್ವಜ ತಲುಪದಿದ್ದರೆ, ಸರ್ಕಾರಿ ನೌಕರರು ಆ ಮನೆಗೆ ಧ್ವಜ ತಲುಪಿಸುವುದು ಅವರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಅಂದಾಜು 4 ಲಕ್ಷ 15 ಸಾವಿರ ಮನೆಗಳಿದ್ದು, ಜಿಲ್ಲಾಡಳಿತದಿಂದ 3 ಲಕ್ಷ 11 ಸಾವಿರ ಮನೆಗಳಿಗೆ ಧ್ಜಗಳನ್ನು ವಿತರಣೆ ಮಾಡಲು ತಿರ್ಮಾನಿಸಿದೆ. ಈಗಾಗಲೇ 2 ಲಕ್ಷದ ಧ್ವಜಗಳು ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳಿಯ ಸಂಸ್ಥೆಗಳಿಂದ ಮನೆ ಮನೆಗೆ ವಿತರಿಸಲಾಗಿರುತ್ತದೆ. ಇನ್ನೆರಡು ದಿವಸಗಳಲ್ಲಿ ಬಾಕಿ ಉಳಿದ 1 ಲಕ್ಷ 11 ಸಾವಿರ ಧ್ವಜಗಳನ್ನು ಮನೆ ಮನೆಗೆ ವಿತರಿಸಲಾಗುವುದು. ಅಂದಾಜು 1 ಲಕ್ಷ 5 ಸಾವಿರ ಧ್ವಜಗಳ ಮಾರಾಟ ಮಾಡಲು ಖಾಸಗಿ ವರ್ತಕರಿಗೆ ಅನುಮತಿ ನೀಡಿದ್ದು, ಪ್ರತಿ ಮನೆಗಳಿಗೆ ಧ್ವಜ ವಿತರಣೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಎಲ್ಲಾ ಮನೆಗಳ ಮೇಲೆ ಆ.13 ರ ಬೆಳಗ್ಗೆ 8 ಗಂಟೆಯಿಂದ ಆ.15 ಸೂರ್ಯಾಸ್ತದವರೆಗೆ ಹಗಲು ರಾತ್ರಿ ನಿರಂತರವಾಗಿ ರಾಷ್ಟ್ರ ಧ್ವಜವನ್ನು ಹಾರಿಸಬಹುದು. ಆದರೆ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಪಂಚಾಯಿತಿ, ಅಂಗನವಾಡಿ, ನಿಗಮ ಮಂಡಳಿಗಳ ಮೇಲೆ ಆ.13 ರಿಂದ ಆ. 15 ವರೆಗೆ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಧ್ವಜರೋಹಣ ಮಾಡುವುದು ಮತ್ತು ಸಂಜೆ ಸೂರ್ಯಾಸ್ತಕ್ಕೆ ಇಳಿಸಬೇಕು. ಹರ್ ಘರ್ ತಿರಂಗಾ ಕಾರ್ಯಕ್ರಮ ಮುಗಿದ ನಂತರ ಮನೆ ಕಚೇರಿಗಳ ಮೇಲೆ ಹಾರಿಸಿದ ಧ್ವಜವನ್ನು ಗೌರವ ಕಾಪಾಡಬೇಕು. ಪ್ಲಾಗ್ ಕೋಡ್ ಆಪ್ ಇಂಡಿಯಾ ಅನುಸಾರ ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ ಬಿ. ಬಳ್ಳಾರಿ ಸೇರಿದಂತೆ ಇತರರು ಇದ್ದರು.