ಚಾಮರಾಜನಗರ : ದಿ.ಆರ್.ಧ್ರುವನಾರಾಯಣ ಅವರು ಉತ್ತಮ ಸಂಸದೀಯ ಪಟು ಅಗಿದ್ದರು. ರಾಜ್ಯದಲ್ಲಿ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರೂ ಕೂಡ ಕಾರಣರಾಗಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಆರ್.ಧ್ರುವನಾರಾಯಣ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆರ್.ಧ್ರುವನಾರಾಯಣ ಅಭಿಮಾನಿ ಬಳಗ, ಚೌಡೇಶ್ವರಿ ದೇವಾಂಗ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆ, ಸಮೃದ್ಧಿ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ಮತ್ತು ಈಸ್ಟ್ ಪಾಯಿಂಟ್ ಆಸ್ಪತ್ರೆ ವತಿಯಿಂದ ಕೊಳ್ಳೇಗಾಲ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧ್ರುವನಾರಾಯಣ ಅವರು ನಮ್ಮ ಕಣ್ಮುಂದೆ ಇಲ್ಲ. ಆದರೆ, ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಅವರ ಹೆಸರನ್ನು ಜೀವಂತವಾಗಿಸಿದೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಬಡವರಿಗಾಗಿ ಆರೋಗ್ಯ ಶಿಬಿರ ಏರ್ಪಡಿಸಿರುವುದು ನಿಜಕ್ಕೂ ಉತ್ತಮವಾದ ಕೆಲಸವಾಗಿದೆ ಎಂದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಆರ್.ಧ್ರುವನಾರಾಯಣ ಅವರು ರಾಜಕೀಯಕ್ಕೆ ಮಾತ್ರ ಸಿಮೀತರಾಗಿರಲಿಲ್ಲ. ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಜನರಿಗಾಗಿ ಕೆಲಸ ಮಾಡಿದ್ದಾರೆ. ಸಮಾಜಮುಖಿ ಕೆಲಸಗಳಿಗೆ ಹಗಳಿರುಳು ಶ್ರಮಿಸಿದ್ದಾರೆ. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ದಲಿತರ, ಶೋಷಿತರ ಧ್ವನಿಯಾಗಿದ್ದಾರೆ. ಇವರ ನಂತರ ಯಾರು ಆ ಸ್ಥಾನವನ್ನು ತುಂಬುತ್ತಾರೆ. ಎಂಬ ಪ್ರಶ್ನೆಗೆ ಆರ್.ಧ್ರುವನಾರಾಯಣ ಉತ್ತರವಾಗಿದ್ದರೂ. ಜೀವಿತಾವಧಿಯಲ್ಲಿ ಶೋಷಿತರ ಧ್ವನಿಯಾಗಿ ಧ್ರುವ ಅವರು ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ ಎಂದರು.
ಮಾಜಿ ಶಾಸಕ ಜಯಣ್ಣ ಮಾತನಾಡಿ, ಅಪಾರವಾದ ಸ್ನೇಹ ಬಳಗವನ್ನು ಆರ್.ಧ್ರುವನಾರಾಯಣ ಹೊಂದಿದ್ದರು. ಅವರ ಜನ್ಮದ ದಿನದ ಅಂಗವಾಗಿ ಆರೋಗ್ಯ ಶಿಬಿರ ಏರ್ಪಡಿಸಿರುವುದು ಶ್ಲಾಘಿಸುವ ವಿಚಾರ ಎಂದು ತಿಳಿಸಿದರು.
ಮಾಜಿ ಶಾಸಕ ನಂಜುಂಡಸ್ವಾಮಿ ಮಾತನಾಡಿ, ಆರ್.ಧ್ರುವನಾರಾಯಣ ಅವರು ಪ್ರಗತಿ, ಅಭಿವೃದ್ಧಿ ಸಂಕೇತ. ಸ್ನೇಹ ಪರವಾದ ವ್ಯಕ್ತಿತ್ವದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದರು ಎಂದರು.
ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ವಿವಿಧ ಗ್ರಾಮಗಳ ಜನರು ಶಿಬಿರದಲ್ಲಿ ಭಾಗವಹಿಸಿದ್ದು. ಸುಮಾರು 400 ಜನರು ಶಿಬಿರ ತಪಾಸಣೆಗೆ ಒಳಪಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಎಸ್ಸಿ ವಿಭಾಗದ ಕಾಂಗ್ರೆಸ್ ರಾಜ್ಯ ಸಂಚಾಲಕ ನಾಗರಾಜು, ಮುಖಂಡ ಕೊಪ್ಪಾಳಿ ಮಹದೇವನಾಯಕ, ಅಣ್ಣಾದ್ರಯ್ಯ, ಶಾಂತರಾಜು, ಬಸ್ತೀಪುರ ಶಾಂತರಾಜು, ಈಸ್ಟ್ ಪಾಯಿಂಟ್ ಆಸ್ಪತ್ರೆಯ ಡಾ.ಶಿವಕುಮಾರ್ ಇತರರು ಇದ್ದರು.