ಮೈಸೂರು: ಧ್ಯಾನ ಮಾಡುವುದರಿಂದ ಮನಸು ಪರಿಶುದ್ಧವಾಗಿರುತ್ತದೆ. ಪ್ರಶಾಂತತೆ ಲಭಿಸುತ್ತದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬಿ.ಕೆ. ಲಕ್ಷ್ಮೀಜಿ ಹೇಳಿದರು.
ಹೂಟಗಳ್ಳಿಯ ಅನಂತೇಶ್ವರ ಭವನದಲ್ಲಿ ಭಾನುವಾರ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಪ್ರಾಂತೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಧ್ಯಾನದಿಂದ ಶಾಂತಿ ಮತ್ತು ಆರೋಗ್ಯ ಲಭಿಸುತ್ತದೆ. ನೆಮ್ಮದಿಯೂ ಇರುತ್ತದೆ. ಕೋಪ ಮಾಡಿಕೊಳ್ಳದಿದ್ದಲ್ಲಿ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಬೆಳಗ್ಗೆ ಹಾಗೂ ಸಂಜೆಯ ವೇಳೆ ಧ್ಯಾನಾಸಕ್ತರಾಗಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ವಿಜಯಕುಮಾರ್ ಬಲ್ಲೇನಹಳ್ಳಿ ಮಾತನಾಡಿ, ಮಕ್ಕಳ ಮನಸು ಚಂಚಲವಾಗಿರುತ್ತದೆ. ಮಕ್ಕಳಲ್ಲಿ ಕಂಡು ಬರುವ ಖಿನ್ನತೆ ಹೋಗಲಾಡಿಸಲು ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಆಗಲೂ ಧ್ಯಾನ ಮಾಡುವಂತೆ ಸೂಚಿಸಲಾಗುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲದಿದ್ದಲ್ಲಿ ಆರೋಗ್ಯ ಹದಗೆಡುತ್ತದೆ ಎಂದು ಹೇಳಿದರು.
ಕೆಲವರು ಧ್ಯಾನ ಮಾಡಿ ಎಂದರೆ ಪೂಜೆ ಮಾಡುವುದು, ನಾವೇಕೆ ಮಾಡಬೇಕು ಎಂದುಕೊಳ್ಳುತ್ತಾರೆ. ಧ್ಯಾನ ಬೇರೆ, ಪೂಜೆ ಬೇರೆ. ಧ್ಯಾನ ಮನಸನ್ನು ಧನಾತ್ಮಕವಾಗಿ ಪರಿವರ್ತಿಸುತ್ತದೆ ಎಂದು ತಿಳಿಸಿದರು.
ಯಾವುದೇ ರಕ್ತಪಾತವಿಲ್ಲದೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ಹೆಗ್ಗಳಿಕೆ ಭಾರತಕ್ಕೆ ಇದೆ. ಮಕ್ಕಳು ಹೇಳುವುದನ್ನು ಕೇಳುವುದಿಲ್ಲ. ಆದರೆ ಮಾಡುವುದನ್ನು ಅನುಕರಿಸುತ್ತಾರೆ. ಆದ್ದರಿಂದ ಪಾಲಕರು ಸರಿಯಾದ ರೀತಿಯಲ್ಲಿ ನಡೆದುಕೊಂಡರೆ ಮಕ್ಕಳು ಕೂಡ ಪಾಲಿಸುತ್ತಾರೆ ಎಂದರು.
ಆಹಾರ ಪದ್ಧತಿ ಮತ್ತು ಜೀವನಶೈಲಿಯೂ ಮುಖ್ಯ.
ಆದ್ದರಿಂದ ಪ್ರತಿಯೊಬ್ಬರೂ ನೀರು, ನಿದ್ದೆ, ಪೌಷ್ಟಿಕ ಆಹಾರ, ವ್ಯಾಯಾಮ, ಸಮಯ- ಈ ಪಂಚ ಸೂತ್ರಗಳನ್ನು ಅನುಸರಿಸಿದರೆ ಆರೋಗ್ಯದಿಂದ ಇರಬಹುದು. ಮನಸ್ಥಿತಿ ಸರಿ ಇದ್ದಲ್ಲಿ ಪರಿಸ್ಥಿತಿ, ಮನೆ ಸ್ಥಿತಿ, ಮನಿ ಸ್ಥಿತಿ- ಎಲ್ಲವೂ ಚೆನ್ನಾಗಿರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಧ್ಯಾನ ಮುಖ್ಯ ಎಂದು ಹೇಳಿದರು.
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಪ್ರಾಂತಪಾಲ ಸಿರಿಬಾಲು, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು.
ಪ್ರಾಂತೀಯ ಅಧ್ಯಕ್ಷೆ ಇಂದಿರಾ ವೆಂಕಟೇಶ್ ಮಾತನಾಡಿದರು. ಆತಿಥೇಯ ಸಮಿತಿ ಅಧ್ಯಕ್ಷ ಒಂದನೇ ಉಪ ಪ್ರಾಂತಪಾಲ ಎಸ್. ವೆಂಕಟೇಶ್, ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಬೈರಿ, ಜಿಲ್ಲಾ ಖಜಾಂಚಿ ಕೃಷ್ಣೋಜಿರಾವ್, ಕ್ಲಬ್‌ನ ಮಾಜಿ ಪ್ರಾಂತಪಾಲ ಜಿ.ಎಸ್. ನಂಜುಂಡಸ್ವಾಮಿ, ಮೂರನೇ ಉಪ ಪ್ರಾಂತಪಾಲ ಎಂ.ಎಸ್. ಸಂತೋಷ್ ಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ನ. ಗಂಗಾಧರಪ್ಪ, ಪಿಆರ್‌ಒ ಎನ್. ಬೆಟ್ಟೇಗೌಡ ಇತರರು ಇದ್ದರು.