ಜಿಲ್ಲೆ

ಧೈರ್ಯ ತುಂಬಿದ ಕ್ಯಾನ್ಸರ್ ವಿನ್ನರ್ಸ್

ಹುಬ್ಬಳ್ಳಿ: ಕ್ಯಾನ್ಸರ್​ನಿಂದ ಗುಣಮುಖರಾದವರು ಸಕಾರಾತ್ಮಕ ಹಾಗೂ ಸ್ಪೂರ್ತಿದಾಯಕ ಮಾತುಗಳ ಮೂಲಕ ಕ್ಯಾನ್ಸರ್ ಪೀಡಿತರಲ್ಲಿ ಧೈರ್ಯ ಮತ್ತು ಜೀವನ ಉತ್ಸಾಹ ತುಂಬಿದ ಅರ್ಥಪೂರ್ಣ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಶನಿವಾರ ಸಂಜೆ ನಡೆಯಿತು.

ನಗರದ ಖಾಸಗಿ ಹೊಟೇಲ್​ನಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಸಿದ್ದ ವೀರ ಪ್ರತಿಭಾ-ಟ್ಯಾಲೆಂಟ್ ಶೋ ಕಾರ್ಯಕ್ರಮದಲ್ಲಿ 20 ಜನ ಕ್ಯಾನ್ಸರ್ ವಿನ್ನರ್ಸ್ (ಮಹಿಳೆಯರು) ಪಾಲ್ಗೊಂಡಿದ್ದರು. ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಹಾಗೂ ಪಥ್ಯ (ಆಹಾರ ಪದ್ಧತಿ) ಅನುಸರಿಸುವ ಮೂಲಕ ಕ್ಯಾನ್ಸರ್ ಅನ್ನು ಗೆಲ್ಲಬಹುದು ಎಂದು ಸಾರಿ ಹೇಳಿದರು.

ಕ್ಯಾನ್ಸರ್​ನಿಂದ ಗುಣಮುಖರಾದ ಪ್ರತಿಮಾ ದೊಡಮನಿ ಮಾತನಾಡಿ, ನನಗೆ ಕ್ಯಾನ್ಸರ್ ಇದೆ ಎಂಬುದು ಗೊತ್ತಾದ ಮೇಲೆ ಒಪ್ಪಿಕೊಳ್ಳಲು ಬಹಳ ದಿನಗಳೇ ಬೇಕಾಯಿತು. ವೈದ್ಯರ ಸೂಕ್ತ ಚಿಕಿತ್ಸೆ, ಯೋಗಾ, ಧ್ಯಾನ ಹಾಗೂ ಕುಟುಂಬದ ಸಹಕಾರದಿಂದ ಗೆಲುವು ಕಂಡಿದ್ದೇನೆ ಎಂದು ಹೇಳಿದರು. ಧಾರವಾಡದ ರಾಜೇಶ್ವರಿ ತಾಯಣ್ಣವರ, ಅರಳುವ ಹೂಗಳೇ ಅಲಿಸಿರಿ...ಬಾಳೊಂದು ಹೋರಾಟ ಮರೆಯದಿರಿ...ಹಾಡು ಹೇಳಿ ಗಮನ ಸೆಳೆದರು. ಗಂಗು ಕದಂ ಅವರು ಸಾಲು ಮರದ ತಿಮ್ಮಕ್ಕನ ಪಾತ್ರದಲ್ಲಿ ಅಭಿನಯಿಸಿ ಪರಿಸರ ಸಂರಕ್ಷಣೆಯ ಮಹತ್ವ ಸಾರಿದರು. ರೇಣುಕಾ ಕಾವಳ್ಳಿ ನೃತ್ಯ ಪ್ರದರ್ಶಿಸಿದರು.

ಬೇಬಿ ನಂದಾ ಕದಂ, ಶೀಲಾ ಬೇಬಿ, ಚಂದ್ರಿಕಾ ಲೋಡಾಯ, ಸರೋಜಾ ಬದ್ದಿ, ಇತರರು ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು.

ಅಂಕಾಲಾಜಿಸ್ಟ್ ಸರ್ಜನ್ ಡಾ. ಗುರುಶಾಂತಪ್ಪ ಯಲಗಚ್ಚಿನ ಉದ್ಘಾಟಿಸಿದರು. ನಟಿ, ನಿರ್ವಪಕಿ ಶೃತಿ ಹರಿಹರನ್, ಎಚ್​ಸಿಜಿ ಎನ್​ಎಂಆರ್ ಕ್ಯಾನ್ಸರ್ ಸೆಂಟರ್​ನ ಡಾ. ವಿಶಾಲ ಕುಲಕರ್ಣಿ, ಚಿಲ್ ಗ್ರುಪ್​ನ ಅಜಯ ಜೋಶಿ, ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಜೇಥಿಯಾ, ಎಂಡಬ್ಲು್ಯಬಿ ಗ್ರುಪ್ ಎಂಡಿ ಗೌತಮ ಬಾಫಣಾ ಇದ್ದರು.