ಜಿಲ್ಲೆ

ಧೀರಜ್ ಸಾಹು ರಾಜೀನಾಮೆಗೆ ಆಗ್ರಹ -ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ದಾವಣಗೆರೆ: ಕೋಟ್ಯಂತರ ರೂ. ಅಕ್ರಮವಾಗಿ ಸಂಗ್ರಹಿಸಿದ ಆರೋಪದಡಿ ಒಡಿಶಾದ ರಾಜ್ಯಸಭಾ ಸದಸ್ಯ ಕಾಂಗ್ರೆಸ್ಸಿನ ಧೀರಜ್ ಸಾಹು ರಾಜೀನಾಮೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪಿ.ಬಿ.ರಸ್ತೆಯಲ್ಲಿ ಸಾಗಿ ನಗರಪಾಲಿಕೆ ಎದುರಿನ ಭಗತ್ ಸಿಂಗ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎನ್ನುವುದಕ್ಕೆ ರಾಜ್ಯಸಭೆ ಸದಸ್ಯ ಧೀರಜ್ ಮನೆಯಲ್ಲಿ ದೊರೆತ 350 ಕೋಟಿ ಹಣವೇ ಸಾಕ್ಷಿ. ಲೋಕಸಭಾ ಚುನಾವಣೆಗಾಗಿ ಹಣ ಸಂಗ್ರಹಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣಲಿದೆ ಎಂದು ಹೇಳಿದರು.

ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 350 ಸ್ಥಾನಗಳಲ್ಲಿ ಗೆಲ್ಲಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದನ್ನು ತಡೆಯಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಲ್ಲಿ ಸ್ವಾಗತಿಸುತ್ತೇವೆ. ಅವರು ಎಲ್ಲೇ ಸ್ಪರ್ಧೆ ಮಾಡಿದರೂ ಕಾಂಗ್ರೆಸ್ ಸರ್ವ ನಾಶ ಖಚಿತ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಶಿವರಾಜ ಪಟೀಲ್, ಬಾತಿ ಚಂದ್ರಶೇಖರ, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್, ಕೊಳೇನಹಳ್ಳಿ ಸತೀಶ್, ಎಲ್. ಎನ್ ಕಲ್ಲೇಶ್, ಬಾತಿ ವಿರೇಶ್, ವಿಶ್ವಾಸ ಎಚ್.ಪಿ. ಹನುಮಂತ ನಾಯಕ ಅನಿಲ್ ಕುಮಾರ್, ಹೆಬ್ಬಾಳ್ ಮಹೇಂದ್ರ, ಶಿವಪ್ರಕಾಶ, ಅಥಿತ್ ಅಂಬರಕರ್, ಆರ್. ಶಿವಾನಂದ, ರಾಜು ನೀಲಗುಂದ, ಅಶ್ವಿನಿ ಕೃಷ್ಣ, ಗೌರಮ್ಮ ಪಾಟೀಲ್, ದ್ರಾಕ್ಷಾಯಿಣಿ ಇತರರಿದ್ದರು.