ಜಿಲ್ಲೆ

ಧಾರ್ವಿುಕ ಕಾರ್ಯಗಳಿಗೆ ಬಂತು ಜೀವಕಳೆ

ಗೋಕರ್ಣ: ಕಳೆದ ಮಾರ್ಚ್​ನಿಂದ ಪೂರ್ಣವಾಗಿ ಸ್ತಬ್ಧವಾಗಿದ್ದ ವಿವಿಧ ಧಾರ್ವಿುಕ ಕಾರ್ಯಗಳಿಗೆ ಗೋಕರ್ಣದಲ್ಲಿ ಮತ್ತೆ ಜೀವಕಳೆ ಬಂದಿದೆ.

ಪಿತೃಕಾರ್ಯ ಸೇರಿ ಬೇರೆ ಬೇರೆ ಕರ್ವಂಗಗಳನ್ನು ಆಚರಿಸಲು ರಾಜ್ಯದ ವಿವಿಧೆಡೆಗಳಿಂದ ಶೃದ್ಧಾವಂತರು ಗೋಕರ್ಣದತ್ತ ಬರುತ್ತಿರುವುದರಿಂದ ನಿಲುಗಡೆಯಾಗಿದ್ದ ಶಾಸ್ತ್ರೋಕ್ತ ಚಟುವಟಿಕೆಗಳು ಮತ್ತೆ ಚಿಗುರೊಡೆಯಲಾರಂಭಿಸಿವೆ. ಇಂತಹ ಕರ್ವಂಗಗಳಿಗೆ ಪುಣ್ಯಪರ್ವ ಎಂದು ಸಾರಲ್ಪಟ್ಟ ಪಿತೃಪಕ್ಷ ಸೆ. 17ಕ್ಕೆ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲ ಪಿತೃಶಾಲೆಗಳಲ್ಲಿ ಮತ್ತೆ ವೈದಿಕ ಮಂತ್ರಘೊಷ ಮಾರ್ಧನಿಸುತ್ತಿವೆ.

ಧಾರ್ವಿುಕ ಲಾಕ್​ಡೌನ್: ಇಂತಹ ಉಭಯ ಕಾರ್ಯ ನೆರವೇರಿಸುವ ಕ್ಷೇತ್ರ ಪುರೋಹಿತರು ಲಾಕ್​ಡೌನ್ ಆರಂಭವಾದಾಗಿನಿಂದ ಕೈಕಟ್ಟಿ ಮನೆಯಲ್ಲಿ ಕೂರುವಂತಾಗಿತ್ತು. ಗೋಕರ್ಣಕ್ಕೆ ಯಾತ್ರಿಕರು ಬರುವುದು ಸಂಪೂರ್ಣವಾಗಿ ನಿಂತಿತ್ತು. ಸರ್ಕಾರದ ನಿಯಮದಿಂದಾಗಿ ಕ್ಷೇತ್ರ ಪುರೋಹಿತರು ಕೂಡ ಕಾರ್ಯ ಮಾಡಿಸುವುದನ್ನು ಬಿಟ್ಟು ಇವುಗಳಿಗೆ ಸ್ವಯಂ ನಿರ್ಬಂಧ ಹೇರಿಕೊಂಡಿದ್ದರು. ಧಾರ್ವಿುಕ ಕಾರ್ಯಗಳು ನಡೆಯುವ ಪುರಾಣ ಪ್ರಸಿದ್ಧ ಕೋಟಿತೀರ್ಥ ಮತ್ತು ಇಲ್ಲಿನ ಹತ್ತಾರು ಪಿತೃಶಾಲೆಗಳು ಕಳೆದ ಆರು ತಿಂಗಳಿನಿಂದ ಬರಿದಾಗಿ ನಿಂತಿದ್ದವು. ಈ ಜಾಗದಲ್ಲಿ ಸದಾ ಮುತ್ತಿರುತ್ತಿದ್ದ ಕಾಗೆಗಳೂ ಈ ಸ್ಥಳದಿಂದ ದೂರಾಗಿದ್ದವು. ಲಾಕ್​ಡೌನ್-4 ತೆರವು ಮಾಡಿಕೊಟ್ಟ ಹಲವು ನಿರ್ಬಂಧದಿಂದಾಗಿ ಜನ ಮತ್ತೆ ಇತ್ತ ಆಗಮಿಸುವಂತಾಗಿದೆ. ಇದರಿಂದ ಗೋಕರ್ಣದ ಹೋಟೆಲ್, ವಸತಿಗೃಹ, ರೆಸಾರ್ಟ್ ಸೇರಿ ವಿವಿಧ ಆರ್ಥಿಕ ಚಲನೆಗಳು ಸಹ ನಿಧಾನವಾಗಿ ಆರಂಭವಾಗುವಂತಾಗಿದೆ.