ಚಿಕ್ಕಬಳ್ಳಾಪುರ: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ (ಮತಾಂತರ ನಿಷೇಧ)ಜಾರಿ ವಿರೋಧಿಸಿ ಸಿಪಿಎಂ ಪ್ರತಿಭಟಿಸಿತು. ನಗರದ ವಾಪಸಂದ್ರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಸಂಚಾರ ತಡೆ ನಡೆಸಿ ಬಳಿಕ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ಕೈಗೊಂಡರು.
ಮತಾಂತರ ನಿಷೇಧ ಮಸೂದೆ ಸಂವಿಧಾನಬದ್ಧವಾಗಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರ. ಮತಬ್ಯಾಂಕ್ ರಾಜಕಾರಣಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ಕಾಯ್ದೆ ಜಾರಿಗೆ ತರುತ್ತಿದೆ ಎಂದು ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಕಿಡಿಕಾರಿದರು.
ಸಮಾನತೆ, ಸಾಮಾಜಿಕ ನ್ಯಾಯ, ಮಾನವೀಯ ತತ್ವಗಳ ಆಧಾರದಲ್ಲಿ ಪ್ರಜಾಸತ್ತಾತ್ಮಕ ಧರ್ಮನಿರಪೇಕ್ಷ ರಾಷ್ಟ್ರವಾಗಿ ಘೋಷಿಸಿಕೊಂಡಿರುವ ಭಾರತ, ಸಂವಿಧಾನದ 25ನೇ ಅನುಚ್ಛೇದದಲ್ಲಿ ದೇಶದ ಪ್ರತಿ ಪ್ರಜೆಯೂ ತನಗಿಷ್ಟ ಬಂದ ಧರ್ಮವನ್ನು ಅನುಸರಿಸುವ, ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡುವ ಹಕ್ಕನ್ನು ಖಾತ್ರಿಪಡಿಸಿದೆ. ಆದರೆ ಬಲವಂತದ ಮತಾಂತರ ತಡೆ ಹೆಸರಿನಲ್ಲಿ ಈ ಹಕ್ಕನ್ನು ಕಿತ್ತುಕೊಳ್ಳುವ ಕಾಯ್ದೆ ಜಾರಿಗೆಗೆ ತರಲಾಗಿದೆ ಎಂದು ಆರೋಪಿಸಿದರು.
ಇಂದಿಗೂ ದೇಶದಲ್ಲಿ ದಲಿತರಿಗೆ ಅಸ್ಪೃಶ್ಯತೆ, ಅವಮಾನಗಳಿಂದ ಮುಕ್ತಿ ಸಿಕ್ಕಿಲ್ಲ. ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಘನತೆಯ ಬದುಕನ್ನು ಬಯಸಿ, ಮತ್ತೊಂದು ಧರ್ಮವನ್ನು ಅಪ್ಪಿಕೊಳ್ಳಲು ಬಯಸುವ ಜನರನ್ನು ಕಾಯ್ದೆಯ ಮೂಲಕ ನಿಯಂತ್ರಿಸಲಾಗುತ್ತಿದೆ. ಇದರ ಮೂಲಕ ಕೋಮುವಾದಿ ಕಾರ್ಯಕರ್ತರ ಪುಂಡಾಟಿಕೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಎಂ.ಪಿ.ಮುನಿವೆಂಕಟಪ್ಪ ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅತಿವೃಷ್ಟಿ, ಬೆಲೆ ಏರಿಕೆ, ನಿರುದ್ಯೋಗ ಸೇರಿ ನಾನಾ ಸಮಸ್ಯೆಗಳು ಕಾಡುತ್ತಿವೆ. ಬಿಟ್ ಕಾಯಿನ್ ಹಗರಣ, ಕಮಿಷನ್ ದಂಧೆ, ಭೂಕಬಳಿಕೆ ಹಗರಣಕ್ಕೆ ಜನರು ಆಕ್ರೋಶಗೊಂಡಿದ್ದು ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಕಾಯ್ದೆ ಜಾರಿಯ ವಿವಾದ ಹುಟ್ಟು ಹಾಕಲಾಗಿದೆ ಎಂದು ವ್ಯಂಗ್ಯವಾಡಿದರು.