ಜಿಲ್ಲೆ

ಧಾರ್ಮಿಕ ಭಾವನೆಗೆ ಧಕ್ಕೆ ಸರಿಯಲ್ಲ, ಬುಳ್ಳಹಳ್ಳಿಯ ಆದಿ ಪರಾಶಕ್ತಿ ಮಠದ ಶ್ರೀ ಸಾಯಿ ಮಂಜುನಾಥ್ ಸ್ವಾಮೀಜಿ ಅಭಿಮತ

ಹೊಸಕೋಟೆ: ಧಾರ್ಮಿಕ ಭಾವನೆಗೆ ಧಕ್ಕೆ ಬರುವ ಹಾಗೆ ನೆಡೆದುಕೊಳ್ಳಬಾರದು. ಅದಾಗ್ಯೂ ಅಂತಹ ಘಟನೆ ನಡೆದರೆ ಎಲ್ಲರೂ ಒಟ್ಟಾಗಿ ಪ್ರತಿಭಟನೆಗೆ ಮುಂದಾಗಬೇಕು ಎಂದು ಬುಳ್ಳಹಳ್ಳಿಯ ಆದಿ ಪರಾಶಕ್ತಿ ಮಠದ ಶ್ರೀ ಸಾಯಿ ಮಂಜುನಾಥ್ ಸ್ವಾಮೀಜಿ ತಿಳಿಸಿದರು.

ನಗರದ ಕೆ.ಆರ್. ವೃತ್ತದ ಬಳಿಯ ಅರಳಿ ಕಟ್ಟೆಯನ್ನು ರಸ್ತೆ ವಿಸ್ತರಣೆ ಸಂದರ್ಭದಲ್ಲಿ ವಿಧಿ ವಿಧಾನ ಪಾಲಿಸದೆ ಕಟ್ಟೆಯನ್ನು ಭಗ್ನಗೊಳಿಸಲಾಗಿದೆ ಎಂದು ಆರೋಪಿಸಿ ಗುರುವಾರ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದೇವಾಲಯ ತೆರವು ಕಾರ್ಯದಲ್ಲಿ ಹಿಂದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತೆ ನಡೆದುಕೊಳ್ಳಲಾಗುತ್ತಿದೆ. ಇದನ್ನು ಸಹಿಸಲಾಗದು ಎಂದರು.

ರಾಜ್ಯ ವಹ್ನಿಕುಲ ತಿಗಳರ ಸಂಘದ ಅಧ್ಯಕ್ಷ ಡಾ.ಸಿ. ಜಯರಾಜ್ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಅರಳಿ ಕಟ್ಟೆಯನ್ನು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಭಗ್ನಗೊಳಿಸಲಾಗಿದೆ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುನ್ನ ಸ್ಥಳೀಯರು ಅಥವಾ ದೇವಾಲಯ ಸಮಿತಿ ಮುಖಂಡರ ಸಭೆ ಕರೆದು ವಿಧಿ ವಿಧಾನ ನೆರವೇರಿಸಿ ತೆರವು ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ನಗರಸಭೆ ಅಧಿಕಾರಿಗಳು ಮುಂಜಾಗ್ರತೆವಹಿಸದೆ ಅರಳಿ ಕಟ್ಟೆಯನ್ನು ಭಗ್ನಗೊಳಿಸಿರುವುದು ಸರಿಯಲ್ಲ ಎಂದರು.

ಕೂಡಲೇ, ಭಗ್ನಗೊಂಡಿರುವ ಅರಳಿ ಕಟ್ಟೆಯನ್ನು ಪುನಃ ನಿರ್ಮಾಣ ಮಾಡಿ ಸಾರ್ವಜನಿಕರ ಪೂಜಾ ಕಾರ್ಯಕ್ಕೆ ಅವಕಾಶ ಮಾಡಿಕೊಡಬೇಕೆಂದರು.

ರಸ್ತೆ ವಿಸ್ತರಣೆ ಜತೆಗೆ ಅರಳಿ ಕಟ್ಟೆಯ ಪಕ್ಕದಲ್ಲಿ ಮೋರಿ ಅಭಿವೃದ್ಧಿಗೆ ಕಾಮಗಾರಿ ಆರಂಭಿಸಿದ್ದು, ಅರಳಿ ಕಟ್ಟೆಗೆ ಧಕ್ಕೆಯಾಗುವುದಿಲ್ಲ. ಈ ಬಗ್ಗೆ ಸ್ಥಳೀಯರ ಬಳಿ ಮಾತನಾಡಲಾಗಿದೆ. ಅಕ್ಟೋಬರ್ 8ರಂದು ಸಚಿವ ಎಂಟಿಬಿ ನಾಗರಾಜ್ ಅರಳಿ ಕಟ್ಟೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮವಹಿಸಲಾಗುವುದು. ಅರುಣ್ ಕುಮಾರ್,  ನಗರಸಭೆ ಅಧ್ಯಕ್ಷ