ಬೀದರ್: ಜಾತ್ರೆ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಪವಿತ್ರವಾಗುತ್ತದೆ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಹೈದರಾಬಾದ್‍ನ ಜಿಯಾಗುಡಾದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಚಂಚಲ ಮನಸ್ಸು ಕೆಟ್ಟ ಆಲೋಚನೆ, ವಿಚಾರಗಳ ಕಡೆ ಹೋಗದಂತೆ ತಡೆಯುವ, ಮನದ ಮೈಲಿಗೆ ತೊಳೆಯುವ ಹಾಗೂ ದೇವರ ಸಾಮೀಪ್ಯಕ್ಕೆ ಒಯ್ಯುವ ಶಕ್ತಿ ಆಧ್ಯಾತ್ಮಕ್ಕೆ ಇದೆ ಎಂದು ಹೇಳಿದರು.
ಬಹಿರಂಗ ಶುದ್ಧವಾಗಿದ್ದರಷ್ಟೇ ಸಾಲದು. ಅಂತರಂಗವೂ ಶುದ್ಧವಾಗಿರಬೇಕು. ಅಂದಾಗ ಮಾತ್ರ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.
ಜೀವನ ಸುಂದರ ಆಗಿಸುವಲ್ಲಿ ಸಹವಾಸದ ಪಾತ್ರವೂ ಬಹಳ ಮುಖ್ಯವಾಗಿದೆ. ಅಂತೆಯೇ ಶರಣರು ಸಾರ ಸಜ್ಜನರ ಸಂಗ ಲೇಸು ಕಂಡಯ್ಯ ಎಂದಿದ್ದಾರೆ. ಸರ್ವಜ್ಞ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ದುಷ್ಟರ ಸಹವಾಸ, ಬೀಡಿ, ಸಿಗರೇಟ್, ಗುಟ್ಕಾ, ಮದ್ಯ ಮೊದಲಾದ ದುಶ್ಚಟಗಳಿಗೆ ದಾಸರಾಗಿ ಅನೇಕರು ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೀವನದ ನಿಜ ಆನಂದ ಆನುಭವಿಸಲು ದುಶ್ಚಟಗಳಿಂದ ದೂರ ಇರಬೇಕು ಎಂದು ಹೇಳಿದರು.
ಮಹಾತ್ಮರು, ಸಂತರು, ಮಹಾ ಪುರುಷರ ವಾಣಿ ಆಲಿಸಬೇಕು. ಸತ್ಕಾರ್ಯಗಳನ್ನು ಮಾಡಬೇಕು. ಈ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಉದ್ಯಮಿ ಸಂತೋಷ ಮಂಟೋಳೆ, ರಾಜಕುಮಾರ ಪಾಟೀಲ, ಬಾಬುರಾವ್ ಗುಡ್ಡಾ, ಜಗನ್ನಾಥ ಟೇಲರ್, ಶಿವಾಜಿ ಮೇತ್ರೆ, ಶಿವಾಜಿ ಬಿರಾದಾರ ಮೊದಲಾದವರು ಇದ್ದರು.